ತಳಸಮುದಾಯದೊಳಗಿನ ವಿಕೃತ ಜಾತಿ ವ್ಯವಸ್ಥೆ: ಲಿಂಗದಹಳ್ಳಿಯಲ್ಲಿ ಸ್ವಜಾತಿಯಿಂದ ಬಹಿಷ್ಕಾರ
ಚಿಕ್ಕಮಗಳೂರು: ತಳಸಮುದಾಯದಲ್ಲಿಯೇ ಜಾತಿ ವ್ಯವಸ್ಥೆ ಅದೆಷ್ಟು ಆಳವಾಗಿ ಬೇರೂರಿದೆ ಎಂದರೆ, ಪರಿಶಿಷ್ಟ ಜಾತಿಗೆ ಸೇರಿದ ಎರಡು ಸಮುದಾಯದ ನಡುವಿನ ಜಾತಿ ಅಂತರ ಒಂದು ಕುಟುಂಬದ ಕಣ್ಣೀರಿಗೆ ಕಾರಣವಾಗಿದೆ.
ಭೋವಿ ಸಮುದಾಯ ಮತ್ತು ಮಾದಿಗ ಸಮುದಾಯಗಳೆರೆಡು ಪರಿಶಿಷ್ಟ ಜಾತಿಗೆ ಸೇರಿದ ಸಮುದಾಯಗಳಾಗಿವೆ. ಭೋವಿ ಜನಾಂಗದ ಮಹಿಳೆಯೊಬ್ಬರು ತಮ್ಮ ಮಗಳನ್ನು ಮಾದಿಗ ಸಮುದಾಯದ ವರನಿಗೆ ಮದುವೆ ಮಾಡಿಕೊಟ್ಟ ಪರಿಣಾಮ ತನ್ನ ಜಾತಿಯಿಂದ ಬಹಿಷ್ಕಾರಕ್ಕೆ ಒಳಗಾಗಿದ್ದಾರೆ. ಈ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ತರೀಕೆರೆ ಬಳಿಯ ಲಿಂಗದಹಳ್ಳಿ ಗ್ರಾಮದ ಭೋವಿ ಸಮುದಾಯದ ಜಯಮ್ಮ ಎಂಬುವವರು ತಮ್ಮ ಮೂರು ಹೆಣ್ಣುಮಕ್ಕಳ ಪೈಕಿ ಇಬ್ಬರನ್ನೂ ತಮ್ಮದೇ ಸಮುದಾಯಕ್ಕೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದರು. ಆದರೆ, ಅವರ ಜೀವನ ಅಷ್ಟೇನೂ ಚೆನ್ನಾಗಿರಲಿಲ್ಲ. ಕೊನೆಯ ಮಗಳು ಅದೇ ಗ್ರಾಮದ ಮಾದಿಗ ಸಮುದಾಯದ ಹುಡುಗನನ್ನು ಪ್ರೀತಿಸಿದ ಕಾರಣಕ್ಕೆ ಅವನಿಗೆ ಮದುವೆ ಮಾಡಿಕೊಟ್ಟಿದ್ದರು.
ಇದೇ ಕಾರಣಕ್ಕೆ ಭೋವಿ ಸಮುದಾಯದ ಮುಖಂಡರು ಒಂದು ವರ್ಷದಿಂದ ಜಯಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದು, ಗ್ರಾಮದ ಯಾವುದೇ ಕಾರ್ಯಕ್ರಮಕ್ಕೆ ಹೋಗದಂತೆ ನಿರ್ಬಂಧ ಹಾಕಿದ್ದಾರೆ. ಸಮುದಾಯದ ಯಾರೊಬ್ಬರೂ ಆಕೆಯನ್ನು ಮಾತನಾಡಿಸಬಾರದು, ಯಾರ ಮನೆಯ ಕಾರ್ಯಕ್ರಮಕ್ಕೂ ಕರೆಯಬಾರದು ಎಂದು ನಿರ್ಬಂಧ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.
ಒಂದು ವರ್ಷದಿಂದ ಇಂತಹ ಬಹಿಷ್ಕಾರದ ಬದುಕು ನಡೆಸುತ್ತಿರುವ ಜಯಮ್ಮ ಇದೀಗ ಜಿಲ್ಲಾಧಿಕಾರಿಗಳ ಮೊರೆ ಹೋಗಲು ತೀರ್ಮಾನಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು, ದೂರು ಹಿಡಿದು ನಿಂತಿರುವುದು ಕಂಡುಬಂದಿದ್ದು, ಜಿಲ್ಲಾಧಿಕಾರಿಗಳಿಂದ ಮಹಿಳೆಗೆ ನ್ಯಾಯ ಸಿಗುತ್ತದೆಯೇ ಕಾದು ನೋಡಬೇಕಿದೆ.


