ಬೆಂಗಳೂರು: ಇ-ಖಾತಾ ನಿರೀಕ್ಷೆಯಲ್ಲಿ ಇದ್ದವರಿಗೆ ರಾಜ್ಯಸರ್ಕಾರ ಸಿಹಿ ಸುದ್ದಿ ನೀಡಿದೆ. ಗ್ರಾಮಾಂತರ ಪ್ರದೇಶದಲ್ಲಿ ಇ-ಖಾತೆ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಹೀಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಧೇಯಕಕ್ಕೆ ಸಚಿವ ಸಂಪುಟ ಸಭೆ ಅಸ್ತು ಎಂದಿದೆ. ವಿಧೇಯಕ ಅಂಗೀಕರಿಸಿದರೆ ಗ್ರಾಮೀಣ ಭಾಗದ ಕಂದಾಯ ಬಡಾವಣೆ, ಗ್ರಾಮಠಾಣಾ ವ್ಯಾಪ್ತಿಯಲ್ಲಿ ಮನೆ, ನಿವೇಶನ ಸಕ್ರಮಕ್ಕೆ ಅವಕಾಶ ನೀಡಿದಂತಾಗುತ್ತದೆ.
ರಾಜಧಾನಿ ಬೆಂಗಳೂರಿನಲ್ಲಿ ಆಸ್ತಿ ಮಾರಾಟ, ಖರೀದಿ ಸೇರಿದಂತೆ ಇತರೆ ಕೆಲಸಗಳಿಗೆ ಇ-ಖಾತಾ ಕಡ್ಡಾಯಗೊಳಿಸಲಾಗಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಎಲ್ಲಾ ಉಪ-ನೋಂದಣಿದಾರರಿಗೆ ಆಸ್ತಿ ನೋಂದಣಿಗೆ ಇ-ಆಸ್ತಿ ಮತ್ತು ಇ-ಖಾತಾ ಸಾಫ್ಟ್‌ವೇರ್ ಬಳಸುವಂತೆ ಆದೇಶಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ.
ಇ-ಸ್ವತ್ತು, ಇ-ಆಸ್ತಿ ಮತ್ತು ಇ-ವಿನ್ಯಾಸ ಸುಗಮವಾಗಿ ವಿತರಿಸಲು ಅನುಕೂಲವಾಗುವಂತೆ ರಾಜ್ಯ ಸರ್ಕಾರ ಕ್ರಮ ತೆಗೆದುಕೊಂಡಿತ್ತು. ಈಗಾಗಲೇ ಇ-ಖಾತಾ ಕುರಿತು ಸೃಷ್ಟಿಯಾಗಿರುವ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಮುಂದಾಗಿತ್ತು. ಇತ್ತೀಚೆಗೆ ವಿಕಾಸಸೌಧದಲ್ಲಿ ಮೂವರು ಸಚಿವರ ನೇತೃತ್ವದಲ್ಲಿ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿತ್ತು.
ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕಂದಾಯ ಇಲಾಖೆ, ನಗರಾಭಿವೃದ್ಧಿ ಇಲಾಖೆ ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಗಳ ಅಧಿಕಾರಿಗಳು ಒಳಗೊಂಡ ಕಾರ್ಯಪಡೆ ರಚನೆ ಸೂಚನೆ ನೀಡಲಾಗಿತ್ತು. ಕಂದಾಯ ಸಚಿವ ಕೃಷ್ಣಭೈರೇಗೌಡ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಪೌರಾಳಿಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿತ್ತು.
ಇ-ಖಾತಾ ಸರ್ವರ್ ಕ್ರ್ಯಾಶ್
ಬೆಂಗಳೂರಿನ ನಾಗಸಂದ್ರ ಬಳಿಯ ದೊಡ್ಡ ಅಪಾರ್ಟ್‌ಮೆಂಟ್ ಒಂದರಲ್ಲಿ ಇತ್ತೀಚೆಗೆ ನಡೆದಿದ್ದ ಶಿಬಿರದಲ್ಲಿ ಕನಿಷ್ಠ 200 ಆಸ್ತಿ ಮಾಲೀಕರಿಗೆ ಬಿಬಿಎಂಪಿಯ ಇ-ಖಾತಾ ಸಾಫ್ಟ್‌ವೇರ್‌ಗೆ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಸಹಾಯ ಮಾಡಿತು. ಆದರೆ ಒಂದು ವಾರದ ಕಾಲ ಸರ್ವರ್ ಕ್ರ್ಯಾಶ್ ಆಗಿದ್ದರಿಂದ ಶಿಬಿರದ ಯಶಸ್ಸು ವ್ಯರ್ಥವಾಗಿತ್ತು.
ಈ ಕ್ರ್ಯಾಶ್‌ನಿಂದಾಗಿ ದತ್ತಾಂಶ ನಷ್ಟವಾಗಿದ್ದು, ಬಿಬಿಎಂಪಿ ಅಧಿಕಾರಿಗಳು ಪೀಡಿತ ದಾಖಲೆಗಳನ್ನು ಮರುಪಡೆಯಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಫೆಬ್ರವರಿ ಅಂತ್ಯದಲ್ಲಿ, ಬಿಬಿಎಂಪಿ ಇ-ಖಾತಾ ಸಾಫ್ಟ್‌ವೇರ್‌ನಲ್ಲಿ ತನ್ನ ಮೊದಲ ತಾಂತ್ರಿಕ ವೈಫಲ್ಯವನ್ನು ಅನುಭವಿಸಿದೆ.