ಬೆಂಗಳೂರು: ನಾಳೆ ಮಾರ್ಚ್ 22 ಶನಿವಾರದ ಕರ್ನಾಟಕ ಬಂದ್ಗೆ ಕರ್ನಾಟಕ ಸಾರಿಗೆ ನೌಕರರ ಒಕ್ಕೂಟ, ಕೆಎಸ್ಆರ್ಟಿಸಿ, ಬಿಎಂಟಿಸಿ ನೌಕರರ ಸಂಘ ಈಗಾಗಲೇ ಬೆಂಬಲ ಘೋಷಿಸಿವೆ. ಇದರಿಂದಾಗಿ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುತ್ತಾ? ಎಂಬ ಪ್ರಶ್ನೆ ಉದ್ಭವಿಸಿದೆ. ಈ ವಿಚಾರವಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ನಾಳೆ ಶನಿವಾರ ಕರ್ನಾಟಕ ಬಂದ್ ಹಿನ್ನೆಲೆ ರಾಜ್ಯದಲ್ಲಿ ಸಾರಿಗೆ ಬಸ್ ಸಂಚಾರ ಇರುತ್ತಾ? ಅಥವಾ ಕರ್ನಾಟಕ ಬಂದ್ ಗೆ ಬೆಂಬಲ ಕೊಡ್ತೀರಾ? ಎಂಬ ವರದಿಗಾರರ ಪ್ರಶ್ನೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಪ್ರತಿಕ್ರಿಯಿಸಿ, ”ನೋಡಿ, ಕರ್ನಾಟಕದ ಬಸ್ ಗಳನ್ನು ಮಹಾರಾಷ್ಟ್ರದಲ್ಲಿ ತಡೆದು ಎಂಇಎಸ್, ಶಿವಸೇನೆ ಸಂಚಾರಕ್ಕೆ ತಡೆಯೊಡ್ಡಿದ ಬಗ್ಗೆ ನಾಳೆ ಕನ್ನಡ ಪರ ಸಂಘಟನೆಗಳು ಒಟ್ಟಾಗಿ ಕರ್ನಾಟಕ ಬಂದ್ ಆಚರಿಸಲು ಕರೆ ಕೊಟ್ಟಿದ್ದಾರೆ, ಆದರೆ ನಮ್ಮ ಸಾರಿಗೆ ಇಲಾಖೆಗೆ ಸೇರಿದ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಗಳಲ್ಲಿ ಪ್ರತಿ ನಿತ್ಯ ಸುಮಾರು 1 ಕೋಟಿ ಜನರು ಪ್ರಯಾಣ ಮಾಡ್ತಾರೆ, ಆದ್ದರಿಂದ ಬಸ್ ಪ್ರಯಾಣಿಕರ ಹಿತವನ್ನೂ ಸಹ ನಾವು ಗಮನದಲ್ಲಿಟ್ಟುಕೊಂಡು ಕರ್ನಾಟಕ ಬಂದ್ ಬಗ್ಗೆ ನಿರ್ಧಾರ ಮಾಡಬೇಕು. ಆದರೆ ಸಾರಿಗೆ ನೌಕರರ ಸಂಘಟನೆಗಳು ಕೈಗೊಳ್ಳುವ ನಿರ್ಧಾರದ ಮೇಲೆ ನಾಳಿನ ಕರ್ನಾಟಕ ಬಂದ್ ಗೆ ಬೆಂಬಲ ಇರುತ್ತೊ? ಇಲ್ಲವೊ? ಎಂಬ ತೀರ್ಮಾನ ಆಗಲಿದೆ, ರಾಜ್ಯದ 4 ಸಾರಿಗೆ ನಿಗಮಗಳ ನೌಕರರು ಏನು ತೀರ್ಮಾನ ಕೈಗೊಳ್ಳುತ್ತಾರೊ? ಆ ತೀರ್ಮಾನದ ಮೇಲೆ ನಾಳಿನ ಕರ್ನಾಟಕ ಬಂದ್ ಗೆ ಬೆಂಬಲ ಕೊಡುವ ನಿರ್ಧಾರವಾಗಲಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.