ಕೆ.ಆರ್.ಪುರ : ಸರ್ಕಾರಿ ಪದವಿ ಕಾಲೇಜಿನಲ್ಲಿ ಜಾನಪದ ಉತ್ಸವದ ಸಡಗರ

Share It

ಕೆ.ಆರ್. ಪುರ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಜನಪದ ಉತ್ಸವ ಗ್ರಾಮೀಣ ಸೊಗಡಿನ ಗುಡಿಸಲು ನಿರ್ಮಾಣ, ಜೋಕಾಲಿಸೇರಿದಂತೆ ಹಲವು ಪ್ರದರ್ಶನಗಳು ಕಣ್ಮನ ಸೆಳೆದವು.

ವಿದ್ಯಾರ್ಥಿಗಳು ಪಂಚೆ, ಶಲ್ಯ ಧರಿಸಿದರೆ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಸೀರೆ, ಉಡುಗೆ ತೊಡುಗೆಗಳನ್ನು ತೊಟ್ಟು ಗಮನ ಸಳೆದರು. ಬೋಧಕ, ಬೋಧಕೇತರ ಸಿಬ್ಬಂದಿಯೂ ಸಾಂಪ್ರದಾಯಿಕ ಉಡುಪಿನಲ್ಲಿ ಬಂದರು.

ರಾಗಿ, ಭತ್ತ ಹಾಗೂ ಆಹಾರ ಧಾನ್ಯಗಳ ರಾಶಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜನಪದ ಕಲಾವಿದ ನಂಜಪ್ಪ ಅವರು, ಜನಪದ ಇಲ್ಲದ ಜೀವನವಿಲ್ಲ. ಇದೊಂದು ಸಡಗರದ ಹಬ್ಬ. ಜನಪದ ನಮ್ಮ ಸಂಸ್ಕತಿ. ತತ್ವ ಮತ್ತು ಸಿದ್ಧಾಂತದ ಮೂಲವಾಗಿದೆ. ಕೃತಕ ಬುದ್ಧಿಮತ್ತೆ, ಡಿಜಿಟಲ್ ಯುಗದಲ್ಲೂ ನಾವು ನಮ್ಮತನ, ನಮ್ಮ ಸಂಸ್ಕೃತಿಯನ್ನು ಮರೆಯಬಾರದು ಎಂದು ಅಭಿಪ್ರಾಯಪಟ್ಟರು.

ಅಳಿವಿನ ಅಂಚಿನಲ್ಲಿರುವ ಗ್ರಾಮೀಣ ಸಂಸ್ಕೃತಿ ಮತ್ತು ಕಲೆಗಳನ್ನು ಉಳಿಸಿ ಬೆಳೆಸಬೇಕಿದೆ. ಜನಪದ ಸಾಹಿತ್ಯದ ಅರಿವು ಮೂಡಿಸುವ ಕೆಲಸ ನಿರಂತರವಾಗಿ ನಡೆಯ‌ಬೇಕು ಎಂದು ಹೇಳಿದರು.

ಪ್ರಾಂಶುಪಾಲರಾದ ಪ್ರತಿಭಾ ಪಾರ್ಶ್ವನಾಥ್ ಅವರು ಮಾತನಾಡಿ, ಆಧುನಿಕತೆ ಪ್ರಭಾವದಿಂದಾಗಿ ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ಕಲೆ ಕಣ್ಮರೆಯಾಗುತ್ತಿವೆ. ಅವುಗಳನ್ನು ಉಳಿಸಿಕೊಂಡು ಹೋಗುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಜನಪದ ಕಲೆಗಳಲ್ಲಿ ದೇಸಿಯ ಸೊಗಡು ಕಾಣಬಹುದು. ಈ ನೆಲದ ಸಂಸ್ಕೃತಿ ಹಾಗೂ ಸಂಸ್ಕಾರ ಅದರಲ್ಲಿ ಅಡಕವಾಗಿದೆ. ಮುಂದಿನ ಪೀಳಿಗೆಗೆ ಅದನ್ನು ಉಳಿಸಿಕೊಂಡು ಹೋಗಬೇಕು ಎಂದು ಹೇಳಿದರು.

ಮೆರವಣಿಗೆಯ ಉದ್ದಕ್ಕೂ ತಮಟೆ, ಡೋಲು, ವಾದ್ಯಗಳ ತಾಳಕ್ಕೆ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ಹೆಜ್ಜೆ ಹಾಕಿದರು.

ಕಾಲೇಜಿನ ಪ್ರಾಧ್ಯಾಪಕರು, ಗಾಯಕಿ ಶ್ರಿಯಾ ಪಿ. ಜೈನ್, ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ , ವಿದ್ಯಾರ್ಥಿಗಳು ಇದ್ದರು.


Share It

You May Have Missed

You cannot copy content of this page