ಬೆಂಗಳೂರು: ರಾಜ್ಯ ಸರಕಾರದ ವ್ಯಾಪ್ತಿಯಲ್ಲಿ ಕರೆದಿದ್ದ ಎಲ್ಲ ನೇರ ನೇಮಕಾತಿ ಅಧಿಸೂಚನೆಗಳನ್ನು ರದ್ದುಗೊಳಿಸಿ ಸರಕಾರ ಆದೇಶ ಮಾಡಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯ ತೀರ್ಮಾನದಂತೆ 28-10-2024 ರ ನಂತರ ಸರಕಾರದ ಯಾವುದೇ ಹುದ್ದೆಗಳ ನೇರ ನೇಮಕಾತಿ ಹುದ್ದೆಗೆ ಕರೆದಿದ್ದ ಅಧಿಸೂಚನೆಗಳು ರದ್ದಾಗಲಿವೆ. ಅದಕ್ಕಿಂತ ಮೊದಲು ಕರೆದಿದ್ದರೂ, ನಂತರದ ದಿನಗಳಲ್ಲಿ ತಿದ್ದುಪಡಿಯಾದ ಅಧಿಸೂಚನೆಗಳನ್ನು ರದ್ದುಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
ಸರಕಾರ ಜಾರಿಗೆ ತಂದಿರುವ ಒಳಮೀಸಲಾತಿ ಅನ್ವಯ ಸರಕಾರಿ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ. 28-10-2024 ರ ನಂತರ ಕರೆದಿದ್ದ ನೇರ ನೇಮಕಾತಿ ಅಧಿಸೂಚನೆಗಳನ್ನು ರದ್ದುಗೊಳಿಸಿ, ಹೊಸ ಮೀಸಲಾತಿ ಅನ್ವಯ ನೇಮಕಾತಿ ಮಾಡುವ ಸಲುವಾಗಿ ಈ ಅಧಿಸೂಚನೆಗಳು ರದ್ದಾಗಲಿವೆ.
ಸರಕಾರದ ತೀರ್ಮಾನ ಸರಕಾರದ ಯಾವುದೇ ಇಲಾಖೆ, ನಿಗಮ, ಮಂಡಳಿ ಹಾಗೂ ಸ್ವಾಯತ್ತ ಸಂಸ್ಥೆಗಳಲ್ಲಿ ಕರೆದಿದ್ದ ನೇರ ನೇಮಕಾತಿ ಹುದ್ದೆಗಳ ಅಧಿಸೂಚನೆಗಳಿಗೆ ಅನ್ವಯವಾಗಲಿದೆ. ಈವರೆಗೆ ಈ ಅಧಿಸೂಚನೆ ಅನ್ವಯ ಯಾವುದೇ ಪ್ರಕ್ರಿಯೆ ನಡೆದಿದ್ದರೂ, ಅದೆಲ್ಲವೂ ರದ್ದಾಗಲಿದೆ. ಒಳಮೀಸಲಾತಿ ಜಾರಿಗಾಗಿ ಸರಕಾರ ತೆಗೆದುಕೊಂಡಿರುವ ಮಹತ್ವದ ನಿರ್ಧಾರ ಇದಾಗಿದೆ.