ಬೆಂಗಳೂರು: ನೀಫಾ ವೈರಸ್ ಗೆ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿ ಬಲಿಯಾಗಿದ್ದು, ಆತನ ಸಂಪರ್ಕಕ್ಕೆ ಬಂದಿದ್ದವರಲ್ಲಿ ಆತಂಕ ಮೂಡಿಸಿದೆ.
ಕೇರಳ ಮಲ್ಲಪುರಂ ಮೂಲದ ವಿದ್ಯಾರ್ಥಿ ಬೆಂಗಳೂರಿನಲ್ಲಿ ಮನಃಶಾಸ್ತ್ರ ವಿದ್ಯಾಭ್ಯಾಸ ಮಾಡುತ್ತಿದ್ದ. ಆತನಿಗೆ ಅ.8 ರಂದು ಸಾಮಾನ್ಯ ಜ್ವರ ಕಾಣಿಸಿಕೊಂಡು ಕೇರಳಕ್ಕೆ ತೆರಳಿದ್ದ. ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ.
ಇದೀಗ ಆತನ ರಕ್ತದ ಮಾದರಿ ವರದಿ ಬಂದಿದ್ದು, ಆತನಿಗೆ ನಿಫಾ ವೈರಸ್ ದೃಢಪಟ್ಟಿದೆ. ಹೀಗಾಗಿ, ರಾಜಧಾನಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಜತೆಗೆ ಟ್ರಾವೆಲ್ ಹಿಸ್ಟರಿ ಭಯಬೀಳಿಸುವಂತಿದೆ.
ವಿದ್ಯಾರ್ಥಿಯ ಶವಸಂಸ್ಕಾರಕ್ಕೆ ಬೆಂಗಳೂರಿನಿಂದ ಸುಮಾರು 25 ಜನರು ಭಾಗವಹಿಸಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ಮೇಲೆ ನಿಗಾ ಇಡಲಾಗುತ್ತದೆ. ಅವರೆಲ್ಲರ ರಕ್ತ ಮತ್ತು ಸೀರಂ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಇನ್ನೆರಡು ದಿನಗಳಲ್ಲಿ ವರದಿ ಬರಲಿದ್ದು, ಅನಂತರ ಮುಂದಿನ ಕ್ರಮಗಳ ಬಗ್ಗೆ ಚಿಂತನೆ ಮಾಡಲಾಗುತ್ತದೆ. ಸಂಪರ್ಕಿತರ ಮೇಲೆ ನಿಗಾ ಇಡಲಾಗಿದೆ. ಸಧ್ಯಕ್ಕೆ ಅವರಲ್ಲಿ ಯಾರಿಗೂ ಯಾವುದೇ ರೋಗ ಲಕ್ಷಣಗಳು ಇಲ್ಲ ಎನ್ನಲಾಗಿದೆ. ಹೀಗಾಗಿ, ಎಲ್ಲವನ್ನೂ ಗಮನಿಸಿ, ಸೂಕ್ತ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.