ರಾಜಕೀಯ ಸುದ್ದಿ

ದೇವಸ್ಥಾನದ ಹಣ ಅನ್ಯ ಧರ್ಮಕ್ಕೆ ಅನ್ನೋ ಅಪಪ್ರಚಾರ: ಬಿಜೆಪಿ ಆರೋಪಕ್ಕೆ ಟಾಂಗ್ ಕೊಟ್ಟ ಅರ್ಚಕರು

Share It


ಬೆಂಗಳೂರು: ಮುಜರಾಯಿ ದೇವಸ್ಥಾನಗಳ‌ ಹಣ 2003 ರ ಕಾಯಿದೆಯನ್ವಯ ಹಿಂದೂ ದೇವಸ್ಥಾನಗಳ ಅಭಿವೃದ್ಧಿಗಾಗಿ ಮಾತ್ರ ಬಳಸಬಹುದು. ಸರ್ಕಾರಕ್ಕೂ ಈ‌ ಹಣ ವರ್ಗಾಯಿಸಲು ಅಥವಾ ಪಡೆಯಲು ಅವಕಾಶವಿಲ್ಲ. ಆದರೂ, ವಿನಾಕಾರಣ ಅನ್ಯ ಧರ್ಮದ ಕೆಲಸಗಳಿಗೆ ಖರ್ಚಾಗುತ್ತದೆ‌ ಎಂದು‌ ಅಪಪ್ರಚಾರ ಮಾಡುವುದು ಒಪ್ಪತಕ್ಕದ್ದಲ್ಲ ಎಂದು ಅರ್ಚಕ‌ರ ಸಮೂಹ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ (ರಿ.)ದ ಬೃಹತ್ ಸಮಾವೇಶದಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು. ಮುಜರಾಯಿ ಸಚಿವರಾಗಿ ರಾಮಲಿಂಗಾ ರೆಡ್ಡಿ ಅವರ ಕಾರ್ಯವೈಖರಿಯನ್ನು ಹಾಡಿ‌ ಹೊಗಳಿದ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಅರ್ಚಕರು, ರಾಮಲಿಂಗಾ ರೆಡ್ಡಿ ಅವರು ಹತ್ತು ವರ್ಷಗಳ ಕಾಲ ಇದೇ ಖಾತೆ ನಿಭಾಯಿಸಲಿ ಎಂದು ಹಾರೈಸಿದರು.

ಧಾರ್ಮಿಕ, ಸಾಂಸ್ಕೃತಿಕ ಸಾಮಾಜಿಕ ನೆಲೆಯಲ್ಲಿ ನಮ್ಮ ಮುಜರಾಯಿ ಇಲಾಖೆಯಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿ ಪ್ರಾರಂಭವಾಗಿರುವುದು ಶುಭ ಸಂಕೇತ. ರಾಮಲಿಂಗಾ ರೆಡ್ಡಿಯವರಿಗೆ ಯಾವುದೇ ಖಾತೆ ನೀಡಲಿ ಆದರೆ, ಮುಜರಾಯಿ ಖಾತೆಯೂ ಆ ಖಾತೆಯೊಂದಿಗೆ ಇರಬೇಕು. ಇನ್ನು ಕನಿಷ್ಠ 10 ವರ್ಷಗಳ ಅವಧಿಗೆ ಅವರು ಮುಜರಾಯಿ ಸಚಿವರಾಗಿರಬೇಕು ಇದು ನಮ್ಮ ಅಭಿಲಾಷೆ ಹಾಗೂ ಕೂಗು ಎಂದು ಒಕ್ಕೊರಲಿನಿಂದ ಅರ್ಚಕರ ಸಮಾವೇಶದಲ್ಲಿ ಕೂಗು‌ ಕೇಳಿಬಂತು.

ಮುಜರಾಯಿ ದೇವಸ್ಥಾನಗಳ‌ ಹಣವು 2003 ರ ಕಾಯಿದೆಯನ್ವಯ ಹಾಗೂ ನಿಯಮಾನುಸಾರ ಹಿಂದೂ ದೇವಸ್ಥಾನಗಳ ಅಭಿವೃದ್ಧಿಗಾಗಿ‌ ಮಾತ್ರವೇ ಹಣ ಖರ್ಚಾಗುತ್ತದೆ. ಸರ್ಕಾರಕ್ಕೂ ಈ‌ ಹಣವನ್ನು ವರ್ಗಾಯಿಸುವ, ಪಡೆಯುವ ಅಥವಾ ಬೇರೆ ಯಾವುದೇ ಉದ್ದೇಶಗಳಿಗೆ ಬಳಸುವ ಅವಕಾಶವಿಲ್ಲ.
ಆದರೆ ವಿನಾಕಾರಣ ಅನ್ಯ ಧರ್ಮದ ಕೆಲಸ‌ಕಾರ್ಯಗಳಿಗೆ ಖರ್ಚಾಗುತ್ತದೆ‌ ಎಂದು‌ ಅಪಪ್ರಚಾರ ಮಾಡುವುದು ಒಪ್ಪತಕ್ಕದ್ದಲ್ಲ ಅದು ಅಕ್ಷರಶಃ ಸುಳ್ಳು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಕಾರಣಕ್ಕೂ ಮುಜರಾಯಿ ದೇವಸ್ಥಾನಗಳನ್ನು ಖಾಸಗೀಕರಣಗೊಳಿಸಬಾರದು ಅಥವಾ ಖಾಸಗಿಯವರಿಗೆ ನೀಡಬಾರದು ಅದಕ್ಕೆ‌ ನಮ್ಮ ವಿರೋಧವಿದೆ. ಖಾಸಗಿಯವರು ವ್ಯಾಪಾರದ ದೃಷ್ಟಿಯಿಂದ ಅಷ್ಟೇ ದೇವಸ್ಥಾನವನ್ನು ನೋಡುತ್ತಾರೆ. ಧರ್ಮವನ್ನು ಉಳಿಸುವ ಅಥವಾ ದೇವರ ಸೇವೆ ಮಾಡುವ ನಮ್ಮಂತಹ ಅರ್ಚಕರ ಬಗ್ಗೆ ಅವರಿಗೆ ಯಾವುದೇ ಕನಿಕರವಿರುವುದಿಲ್ಲ. ನಮಗಾಗಿ ಯಾವುದೇ ಯೋಜನೆಗಳನ್ನು ತರುವ ಪ್ರಯತ್ನ ಕೂಡ ನಡೆಯುವುದಿಲ್ಲ ಎಂದು ಸಂಘ ತೀರ್ಮಾನಿಸಿತು.

ರಾಜ್ಯದಲ್ಲಿರುವ 34,564 ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇವಾಲಯಗಳಲ್ಲಿ, 34,166 ಸಿ ವರ್ಗದ ದೇವಾಲಯಗಳಿದ್ದು, ಮಾನ್ಯ ರಾಜ್ಯಪಾಲರು ಕಾಯ್ದೆಗೆ ಅನುಮೋದನೆ ನೀಡಿದ ಕೂಡಲೇ ಸಾಮಾನ್ಯ ಸಂಗ್ರಹಣಾ ನಿಧಿಯನ್ನು ಈ ದೇವಾಲಯಗಳ ಅಭಿವೃದ್ದಿ ಹಾಗೂ ಅರ್ಚಕರುಗಳ ಕ್ಷೇಮಾಭಿವೃದ್ದಿಗೆ ಹಣ ವಿನಿಯೋಗಿಸಲು ತುಂಬಾ ಅನುಕೂಲವಾಗುತ್ತದೆ ಎಂಬ ಒತ್ತಡ ಕೇಳಿಬಂತು.

ಇಲ್ಲಿಯವರೆಗೆ ಬಡ ಅರ್ಚಕರ ಬಗ್ಗೆ ಯಾರೋಬ್ಬರೂ ಕಾಳಜಿವಹಿಸಿರಲಿಲ್ಲ. ರಾಮಲಿಂಗಾ ರೆಡ್ಡಿ ಅವರ ದೂರದೃಷ್ಟಿ ಹಾಗೂ ಕಾಳಜಿಯ ಫಲವಾಗಿ ಮಸೂದೆ ನಮಗೊಂದು ಭರವಸೆ ಮೂಡಿಸಿದೆ. ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕದಿರುವುದು ನಮ್ಮಂತಹ ಸಹಸ್ರಾರು ಅರ್ಚಕರು/ನೌಕರರ ಪಾಲಿಗೆ ನೋವುಂಟು ಮಾಡಿದೆ. ವಿರೋಧ ಪಕ್ಷ ಬಿಜೆಪಿ ಹಿಂದೂ ಧರ್ಮವನ್ನು ಉಳಿಸುವವರು ನಾವು ಎಂದು ಬಡಾಯಿ ಕೊಚ್ಚಿಕೊಳ್ಳುವುದನ್ನು ಬಿಟ್ಟು ಅರ್ಚಕರ ಉಳಿತಿಗಾಗಿ ತಂದಿರುವ ಕಾಯಿದೆಯನ್ನು ಬೆಂಬಲಿಸುವಂತಹ ಕಾರ್ಯ‌ಮಾಡಬೇಕು. ಪಕ್ಷ ಯಾವುದೇ ಇರಲಿ ಧರ್ಮ, ದೇವಸ್ಥಾನ, ಭಕ್ತಾದಿಗಳ ಭಾವನೆಯೊಂದಿಗೆ ರಾಜಕೀಯ ಬೆರಸಬಾರದು ಎಂದು ಮನವಿ ಮಾಡಿದರು. ರಾಜ್ಯಪಾಲರು ಶೀಘ್ರದಲ್ಲಿಯೇ ಸದರಿ‌ ಮಸೂದೆಗೆ ಅಂಕಿತ ಹಾಕುವ ಭರವಸೆ ವ್ಯಕ್ತಪಡಿಸಿದರು.

ಈ ಒಕ್ಕೂಟದ ನೇತೃತ್ವದಲ್ಲಿ ಕರ್ನಾಟಕ ರಾಜ್ಯದ ಎ, ಬಿ ಮತ್ತು ಸಿ ವರ್ಗದ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಚಕರ, ಆಗಮಿಕರ ಹಾಗೂ ಉಪಾಧಿವಂತರುಗಳ ಕಷ್ಟ ಕಾರ್ಪಣ್ಯಗಳಿಗಾಗಿ ಅವರ ದುಃಖ ದುಮ್ಮಾನಗಳಿಗೆ ಸ್ಪಂದಿಸಿ ಸದಾ ಅವರ ಏಳಿಗೆಗಾಗಿ ಸುಮಾರು 50 ವರ್ಷಗಳಿಂದ ಸರ್ಕಾರದೊಡನೆ ಹೋರಾಡುತ್ತಿರುವ ಹಿಂದು ಧಾರ್ಮಿಕ ಸರ್ವ ಸಮಾಜದ ದೇವಾಲಯಗಳ ನೌಕರರನ್ನು ಒಳಗೊಂಡಿರುವ ಸಂಸ್ಥೆಯಾಗಿರುತ್ತದೆ. ಸಮಾವೇಶದಲ್ಲಿ ರಾಜ್ಯದ ಹಲವು ಜಿಲ್ಲೆಗಳಿಂದ ಆಗಮಿಸಿದ್ದ ಅರ್ಚಕರುಗಳು ಕಿಕ್ಕಿರಿದು ನೆರೆದಿದ್ದರು.

ಈ ಸಮಾವೇಶದಲ್ಲಿ ಡಿಸಿಎಂ ಡಿ.ಕೆ‌ ಶಿವಕುಮಾರ್, ಗೃಹಸಚಿವ ಡಾ. ಜಿ.ಪರಮೇಶ್ವರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ,‌‌ ಆರೋಗ್ಯ ಸಚಿವ ಹಾಗೂ ಸಂಘದ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಡಾ. ರಾಧಾಕೃಷ್ಣ ಕೆ.ಇ., ಗೌರವ ಪ್ರಧಾನ ಸಲಹೆಗಾರರು, ಡಾ. ಎಸ್.ಆರ್. ಶೇಷಾದ್ರಿ, ಭಟ್ಟರ್, ಗೌರವ ಉಪಾಧ್ಯಕ್ಷರು, ಡಾ. ಕೆ.ಎಸ್.ಎನ್. ದೀಕ್ಷಿತ್, ಮುಖ್ಯ ಪ್ರಧಾನ ಕಾರ್ಯದರ್ಶಿ, ಟಿ.ಕೆ. ಶಾಮಸುಂದರ್, ದೀಕ್ಷಿತ್, ಸಹ ಕಾರ್ಯದರ್ಶಿ, ಕೆ.ಎಸ್. ಉಮೇಶ್ ಶರ್ಮ, ಸಂಘಟನಾ ಕಾರ್ಯದರ್ಶಿ, ಹೆಚ್.ಎಸ್. ರಂಗರಾಜನ್, ಸಂಘಟನಾ ಕಾರ್ಯದರ್ಶಿ ಉಪಸ್ಥಿತರಿದ್ದರು.


Share It

You cannot copy content of this page