ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಗೆ ಮೊಬೈಲ್ ಹಾಗೂ ಸಿಮ್ ನೀಡಿದವರನ್ನು ಪತ್ತೆ ಮಾಡಿದ್ದಾರೆ.
ಜೈಲಲ್ಲಿ ದರ್ಶನ್ ವಿಡಿಯೋ ಕಾಲ್ ಮಾಡಿದ್ದ ಕೇಸ್ನಲ್ಲಿ ಆತನಿಗೆ ಮೊಬೈಲ್ ಮತ್ತು ಸಿಮ್ ಕಾರ್ಡ್ ಕೊಟ್ಟಿದ್ದು ಯಾರು ಎಂಬುದೇ ಗೊತ್ತಿರಲಿಲ್ಲ. ಆ ಬಗ್ಗೆ ತನಿಖೆ ಮಾಡುತ್ತಿರುವ ಪರಪ್ಪನ ಅಗ್ರಹಾರ ಪೊಲೀಸರು ಈಗ ಸಿಮ್ ಕೊಟ್ಟ ವ್ಯಕ್ತಿಯನ್ನು ಪತ್ತೆ ಮಾಡಿದ್ದಾರೆ. ದರ್ಶನ್ ರೌಡಿಶೀಟರ್ ಧರ್ಮನ ಮೊಬೈಲ್ನಿಂದ ಬ್ಯಾಡರಹಳ್ಳಿ ರೌಡಿ ಶೀಟರ್ ಸತ್ಯನಿಗೆ ವಿಡಿಯೋ ಕಾಲ್ ಮಾಡಿದ್ದ. ಈ ಮೊಬೈಲ್ ಧರ್ಮನಿಗೆ ಸೇರಿತ್ತು ಎಂಬುದು ಗೊತ್ತಾಗಿದೆ. ಬಾಣಸವಾಡಿ ರೌಡಿ ಶೀಟರ್ ಧರ್ಮನಿಗೆ ಬಾಣಸವಾಡಿಯ ಟೂರ್ಸ್ ಅಂಡ್ ಟ್ರಾವೆಲ್ಸ್ ಮಾಲೀಕ ಮಣಿವಣ್ಣನ್ ಎಂಬಾತ ಸಿಮ್ ನೀಡಿದ್ದ ಎಂಬುದು ಗೊತ್ತಾಗಿದೆ.
ಬಾಣಸವಾಡಿಯಲ್ಲಿ ಒಂದು ಟೂರ್ಸ್ ಆ್ಯಂಡ್ ಟ್ರಾವಲ್ಸ್ ನಡೆಸುವ ಮಣಿವಣ್ಣನ್, ಕಂಪನಿಯ ಚಾಲಕ ಯಾದವ್ ಹೆಸರಲ್ಲಿ ಸಿಮ್ ಖರೀದಿ ಮಾಡಿದ್ದ ಎನ್ನಲಾಗಿದೆ. ನಂತರ ಬಟ್ಟೆಯಲ್ಲಿ ಅಡಗಿಸಿ ಜೈಲಿಗೆ ಕಳುಹಿಸಿದ್ದ. ಮೊದಲು ಜೈಲಿನ ಕೆಲ ಭ್ರಷ್ಟ ಅಧಿಕಾರಿಗಳ ಮೂಲಕ ಮೊಬೈಲ್ ಅನ್ನೂ ಸಹ ಕಳುಹಿಸಿದ್ದ ಎನ್ನಲಾಗಿದೆ.
ರೌಡಿ ಧರ್ಮನಿಗಾಗಿ ಒನ್ ಪ್ಲಸ್ ಮೊಬೈಲ್ ಅನ್ನು ಮೆಜೆಸ್ಟಿಕ್ ಬಳಿಯ ಮೊಬೈಲ್ ಅಂಗಡಿಯಿಂದ ಖರೀದಿ ಮಾಡಿದ್ದ. ಮೊಬೈಲ್ ಖರೀದಿಗೂ ಮುನ್ನ ಮೊಬೈಲ್ ಫೋಟೋ ಕಳುಹಿಸಿ ಯಾವುದು ಬೇಕು ಎಂದು ಕೇಳಿದ್ದ. ಈ ಸಂಬಂಧ ಅಂಗಡಿ ಮಾಲೀಕನ ಮೊಬೈಲ್ನಿಂದ ಪೊಲೀಸರು ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ.
ಈ ವೇಳೆ ಎರಡು ಮೊಬೈಲ್ ಫೋಟೋ ಕಳುಹಿಸಿ ಒಂದು ಮೊಬೈಲ್ ಆಯ್ಕೆ ಮಾಡುವಂತೆ ಹೇಳಿದ್ದು, ನಂತರ ಒನ್ ಪ್ಲಸ್ ಮೊಬೈಲ್ ಅನ್ನು ಆಯ್ಕೆ ಮಾಡಿಕೊಂಡಿದ್ದು ಎಲ್ಲವೂ ಬಯಲಾಗಿದೆ. ಈಗ ಮೊಬೈಲ್ ಅಂಗಡಿ ಮಾಲೀಕನನ್ನ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.
ಟ್ರಾವೆಲ್ ಮಾಲೀಕ ಮಣಿವಣ್ಣನ್ ಬಂಧಿಸಿದ್ದ ಪೊಲೀಸರು ಸದ್ಯ ಠಾಣೆ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ವಿಡಿಯೋ ಕಾಲ್ನ ವಿಡಿಯೋ ವೈರಲ್ ಆಗುತ್ತಿದ್ದಂತೆ ಧರ್ಮ ಮೊಬೈಲ್ ಮತ್ತು ಸಿಮ್ ಅನ್ನು ಜಜ್ಜಿ ಟಾಯ್ಲೆಟ್ನಲ್ಲಿ ಹಾಕಿ ನೀರು ಸುರಿದಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ.