ಬೆಂಗಳೂರು: ಕರ್ನಾಟಕದ ಅತ್ಯಂತ ಜನಪ್ರಿಯ ಯೂಟ್ಯೂಬರ್ ಡಾ.ಬ್ರೋ ಅವರು ಇದೀಗ ನೈಜೀರಿಯಾಕ್ಕೆ ಹೋಗಿ ಕನ್ನಡ ಪ್ರೇಮ ಮೆರೆದಿದ್ದಾರೆ. ಅವರು ಯಾವುದೇ ದೇಶಕ್ಕೆ ಹೋಗಲಿ ಅಲ್ಲಿಯ ಜನರಿಗೆ ಕನ್ನಡ ಪರಿಚಯಿಸುತ್ತಾರೆ. ಅವರ ಬಾಯಿಂದಲೇ ಕನ್ನಡದಲ್ಲಿ ಮಾತನಾಡುವಂತೆ ಮಾಡುವಷ್ಟು ಕಲೆ ಡಾ. ಬ್ರೋ ಅವರಿಗಿದೆ. ಬ್ರೋ ಹೇಳಿದಂತೆ ವಿದೇಶಿಗರು ಸಹ ಕನ್ನಡ ಉಚ್ಚರಿಸುತ್ತಾರೆ.
ಅವರು ಇದೀಗ ನೈಜೀರಿಯಾದ ಶಾಲೆಗೆ ಹೋಗಿ ಅಲ್ಲಿನ ಮಕ್ಕಳಿಗೆ ಕನ್ನಡ ಭಾಷೆಯನ್ನು ಹೇಳಿಕೊಡುವ ಮೂಲಕ ಕೋಟ್ಯಂತರ ಕನ್ನಡಿಗರ ಮನ ಗೆದ್ದಿದ್ದಾರೆ. ಅವರು ಕೊಳಚೆ ನೀರಿನ ಮೇಲೆ ಕಟ್ಟಲಾದ ಆಫ್ರಿಕಾದ ತಾಣವೊಂದಕ್ಕೆ ತೆರಳಿ, ಅಲ್ಲಿನ ಸ್ಥಳೀಯ ಶಾಲೆಯೊಂದಕ್ಕೆ ಭೇಟಿ ನೀಡಿದ್ದಾರೆ. ಆರಂಭದಲ್ಲಿ ಅಲ್ಲಿಯ ಮಕ್ಕಳಿಗೆ ಭಾರತ ಹಾಗೂ ಕರ್ನಾಟಕದ ಬಗ್ಗೆ ಹೇಳಿದ್ದಾರೆ. ಕನ್ನಡ ಅಕ್ಷರಮಾಲೆಯನ್ನು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಹೇಳಿಕೊಟ್ಟ ಡಾ.ಬ್ರೋ ಅವರು ಅಲ್ಲಿಯ ಮಕ್ಕಳಿಗೆ ಕಲಿಸಿದ್ದಾರೆ.
ಮಕ್ಕಳು ಸಹಾ ಅತ್ಯಂತ ಕುತೂಹಲದಿಂದ ಕನ್ನಡವನ್ನು ಹೇಳುವ ಸನ್ನಿವೇಶ ಇದೀಗ ಭಾರಿ ವೈರಲ್ ಆಗಿದೆ. ಶಾಲೆಗೆ ಹೋಗಿರುವ ಅವರು ನಾನು ನಿಮ್ಮ ಹೊಸ ಶಿಕ್ಷಕ ಎಂದು ಮೊದಲಿಗೆ ಪರಿಚಯ ಮಾಡಿಕೊಂಡಿದ್ದಾರೆ. ಬಳಿಕ ನಿಮಗೆ ಭಾರತ ಗೊತ್ತಾ ಎಂದು ಕೇಳಿದ್ದಾರೆ. ಆನಂತರ ಭಾರತದಲ್ಲಿ ಕರ್ನಾಟಕ ಎಂಬ ರಾಜ್ಯವಿದೆ ಎಂದು ಪರಿಚಯಿಸಿದ್ದಾರೆ.
ಇಂಗ್ಲಿಷ್ ನ ಅಲ್ಪಾಬೆಟ್ ರೀತಿಯಲ್ಲಿ ಕನ್ನಡದ ಅ ಆ ಇ ಈ.. ಎಂದು ಕನ್ನಡ ವರ್ಣಮಾಲೆಯನ್ನು ಮಕ್ಕಳಿಗೆ ಹೇಳಿಕೊಟ್ಟಿದ್ದಾರೆ. ನೈಜೀರಿಯಾದ ಮಕ್ಕಳು ಸಹ ಖುಷಿಯಿಂದ ಬ್ರೋ ಹೇಳಿಕೊಟ್ಟಂತೆ ಕನ್ನಡ ಉಚ್ಚರಿಸಿದ್ದಾರೆ. ಅವರ ಕನ್ನಡ ಪ್ರೀತಿಗೆ ಕನ್ನಡಿಗರು ಮತ್ತೊಮ್ಮೆ ಬೇಷ್ ಎಂದು ಕಮೆಂಟ್ ಮಾಡಿದ್ದಾರೆ.
ಡಾ.ಬ್ರೋ ಕಳೆದ ಐದಾರು ವರ್ಷಗಳಿಂದ ವಿಶ್ವದ ನಾನಾ ದೇಶಗಳಿಗೆ ತೆರಳಿ ಅಲ್ಲಿನ ವಿಶೇಷತೆಗಳನ್ನು ಕನ್ನಡಿಗರಿಗೆ ನೀಡುತ್ತಾ ಬಂದಿದ್ದಾರೆ. ಅತ್ಯಂತ ಅಪಾಯದ ಸನ್ನಿವೇಶವನ್ನು ಹಲವು ಬಾರಿ ಎದುರಿಸಿದ್ದಾರೆ. ಇದೀಗ ಕರ್ನಾಟಕದ ರಾಜ್ಯೋತ್ಸವದ ಎದುರಲ್ಲೇ ನೈಜೀರಿಯಾದಂತಹ ಅಪಾಯಕಾರಿ ದೇಶಕ್ಕೆ ಹೋಗಿ ವಿಶಿಷ್ಟವಾಗಿ ಕನ್ನಡ ಹೇಳಿಕೊಟ್ಟಿರುವ ಅವರ ಕನ್ನಡ ಪ್ರೇಮ ಎಲ್ಲರ ಮನ ಗೆದ್ದಿದೆ.
ಯಾವುದೇ ದೇಶಕ್ಕೆ ತೆರಳಿದರೂ ಅಲ್ಲಿಯ ಪ್ರವಾಸಿ ತಾಣದ ಜೊತೆಗೆ ನಗರ, ಹಳ್ಳಿ, ಜನರ ಸಂಸ್ಕೃತಿ, ಜೀವನವನ್ನು ವಿವರಿಸುವುದು ಅವರ ವಿಶೇಷತೆ. ನೈಜೀರಿಯಾ ಪ್ರವಾಸಕ್ಕೆ ತೆರಳಿದ್ದಾಗ ಅಲ್ಲಿನ ಮಾರುಕಟ್ಟೆ, ಜನ, ಕುರಿ, ಮೇಕೆ ಮುಂತಾದವುಗಳ ವಿಶಿಷ್ಟ ವಿಡಿಯೋ ಮಾಡಿ ಈಗ ಕನ್ನಡಿಗರಿಗೆ ನೈಜೀರಿಯಾ ಜನರ ಬದುಕನ್ನು ತೋರಿಸಿಕೊಟ್ಟಿದ್ದಾರೆ.