ಬೆಂಗಳೂರು: ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ನೀಡುವ City with Best Record of Public Involvement in Transport ವಿಭಾಗದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು Award of Excellence in Urban Transport ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಭಾನುವಾರ ಗುಜರಾತ್ ನ ಮಹಾತ್ಮ ಗಾಂಧಿ ಮಂದಿರ ಕನ್ವೆನ್ಷನ್ ಸೆಂಟರ್, ಗಾಂಧಿನಗರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರಲಾಲ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಆರ್, Award of Excellence in Urban Transport ಪ್ರಶಸ್ತಿ ಸ್ವೀಕರಿಸಿದರು.
ಭಾರತ ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿಯು ನಾಗರಿಕರ ಸುರಕ್ಷತೆ ಮತ್ತು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಪ್ರೋತ್ಸಾಹಿಸುವುದಾಗಿದ್ದು ಅಕ್ಟೋಬರ್ ನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ದೇಶದ ಇತರೆ ನಗರ ಸಾರಿಗೆ ಸಂಸ್ಥೆಗಳು ಮತ್ತು ಮುನ್ಸಿಪಲ್ ಕಾರ್ಪೊರೇಷನ್ ಗಳೊಂದಿಗೆ ಸ್ಪರ್ಧಿಸಿ ಈ ಗೌರವಾನ್ವಿತ ಪುರಸ್ಕಾರವನ್ನು ಪಡೆದಿದೆ.
ನಗರದೊಳಗೆ ಪ್ರಯಾಣಿಸಲು ನಾಗರಿಕರಿಗೆ ಸುರಕ್ಷಿತ, ಪರಿಸರ ಸ್ನೇಹಿ ಮಾರ್ಗವನ್ನು ಒದಗಿಸುವುದು ಸಂಸ್ಥೆಯ ಗುರಿಯಾಗಿದ್ದು ಎಚ್ಎಸ್ಆರ್ ಬಡಾವಣೆಯ ನಾಗರಿಕರಿಗೆ ವಿನೂತನ ಮಾದರಿಯ intra layout (ಬಡಾವಣೆ ಒಳಗಿನ ) ಸೇವೆಯಿಂದ ಸಾರ್ವಜನಿಕ ಮನ್ನಣೆ ಪಡೆದಿದ್ದು ರಾಷ್ಟ್ರದಾದ್ಯಂತ ಈ ಮಾದರಿಯ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.