ವಕ್ಪ್ ಬೋರ್ಡ್ ಆಸ್ತಿ​​ ವಿವಾದ: ಸವಣೂರಿನಲ್ಲಿ ಮುಸ್ಲಿಂ ಮುಖಂಡನ ಮನೆಗೆ ಕಲ್ಲು ತೂರಾಟ

IMG-20241031-WA0010
Share It

ಶಿಗ್ಗಾವಿ: ಜಿಲ್ಲೆಯ ಸವಣೂರು ತಾಲೂಕಿನ ಕಡಕೋಳ ಗ್ರಾಮದಲ್ಲಿ ವಕ್ಫ್​ ಬೋರ್ಡ್​​ ಹೆಸರಿನಲ್ಲಿ ಖಾತೆ ಇಂದೀಕರಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಉದ್ರಿಕ್ತರ ಗುಂಪು ಮುಸ್ಲಿಂ ಮುಖಂಡರ ಮನೆಗಳ ಮೇಲೆ‌ ಕಲ್ಲು ತೂರಾಟ ನಡೆಸಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.

ವಾಸವಿದ್ದ ಮನೆಗಳನ್ನು ಖಾಲಿ‌ ಮಾಡಿಸಬಹುದು ಎಂಬ ಭೀತಿಯಿಂದ ಉದ್ರಿಕ್ತರ ಗುಂಪು ಮುಸ್ಲಿಂ ಮುಖಂಡ ಮೊಹಮ್ಮದ್ ರಫಿ ಎಂಬುವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದೆ. ಅಲ್ಲದೆ, ಮನೆ ಮುಂದಿದ್ದ ಬೈಕ್ ಅನ್ನು ಜಖಂ ಮಾಡಲಾಗಿದೆ.

ಕಲ್ಲು ತೂರಾಟ ಹಾಗೂ ಪರಿಸ್ಥಿತಿ ಉದ್ವಿಗ್ನಗೊಂಡ ಬೆನ್ನಲ್ಲೇ, ಹಾವೇರಿ ಡಿಸಿ, ಎಸ್​​ಪಿ, ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್, ಎಸ್​ಪಿ ಅಂಶುಕುಮಾರ್ ಕಡಕೋಳ ಗ್ರಾಮಕ್ಕೆ ದೌಡಾಯಿಸಿ ಅಹಿತಕರ ಘಟನೆ ನಡೆಯದಂತೆ ಗ್ರಾಮಸ್ಥರ ಮನವೊಲಿಕೆಗೆ ಯತ್ನಿಸಿದರು.

ಗಲಾಟೆಗೆ ಕಾರಣರಾದವರನ್ನು ಬಂಧಿಸಲು ಮುಂದಾದ ಪೊಲೀಸರು, ಗಲಾಟೆಗೆ ಪ್ರಚೋದನೆ ನೀಡಿದರನ್ನೂ ಪತ್ತೆ ಮಾಡಲು ಮುಂದಾಗಿದ್ದಾರೆ. ಸದ್ಯ ಸವಣೂರು ತಾಲೂಕಿನ ಕಡಕೋಳ ಗ್ರಾಮ ಬೂದಿಮುಚ್ಚಿದ ಕೆಂಡದಂತಿದೆ.

ಗ್ರಾಮದ ಕೆಲವರ ಮನೆ ಮೇಲೆ ಕಲ್ಲು ತೂರಾಟ ನಡೆದಿದೆ. ನಮಗೆ ಸಂಜೆ 7.30ಕ್ಕೆ ಮಾಹಿತಿ ಬಂತು. ಕೂಡಲೇ ಸ್ಥಳಕ್ಕೆ ಧಾವಿಸಿದೆವು. ಗಲಾಟೆಯಲ್ಲಿ ಐವರಿಗೆ ಗಾಯಗಳಾಗಿವೆ. ಗಲಾಟೆಗೆ ಸಂಬಂಧಿಸಿದಂತೆ ದೂರು ಕೊಡಲು ಯಾರೂ ಸಿದ್ಧರಿಲ್ಲ. ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುತ್ತೇವೆ ಎಂದು ಹಾವೇರಿ ಎಸ್​ಪಿ ಅಂಶು ಕುಮಾರ್ ತಿಳಿಸಿದ್ದಾರೆ.

ಹಲ್ಲೆಗೊಳಗಾದವರಿಂದಲೂ ಮಾಹಿತಿ ಪಡೆದು ದೂರು ಸ್ವೀಕರಿಸುತ್ತೇವೆ. ಗಲಾಟೆಗೆ ಸಂಬಂಧಿಸಿದಂತೆ 15 ಜನರನ್ನು ವಶಕ್ಕೆ ಪಡೆದಿದ್ದೇವೆ. ಭದ್ರತೆಗೆ 4 ಕೆಎಸ್​ಆರ್​ಪಿ ತುಕಡಿ, 200 ಪೊಲೀಸ್​ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಕಡಕೋಳ ಗ್ರಾಮದಲ್ಲಿ ರೂಟ್​ಮಾರ್ಚ್ ಕೂಡಾ‌ ಮಾಡಲಾಗುತ್ತದೆ. ಗಲಾಟೆಯಲ್ಲಿ ದುಷ್ಕರ್ಮಿಗಳು ಕೆಲವರ ಮನೆಗಳ ಗಾಜು ಒಡೆದಿದ್ದಾರೆ. ಸದ್ಯ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಹಲ್ಲೆಗೊಳಗಾದವರಿಗೆ ಎಕ್ಸ್​ರೇ ಮಾಡಿಸುತ್ತೇವೆ ಎಂದು ಎಸ್​ಪಿ ಅಂಶು ಕುಮಾರ್ ಹೇಳಿದ್ದಾರೆ.

ವೈಯಕ್ತಿಕವಾಗಿ ಯಾರಿಗೂ ನಾವು ನೋಟಿಸ್ ಕೊಟ್ಟಿರಲಿಲ್ಲ. ಹಿಂದೆ ಇದ್ದ ಪಟ್ಟಿ ಮೇಲೆ ಮುಂದಿನ ಕ್ರಮಕ್ಕೆ ಪತ್ರ ಬರೆದಿದ್ದೆವು. ವಕ್ಫ್​ ಆಸ್ತಿ ಎಂದು ಮನೆ ದಾಖಲೆಗಳಲ್ಲೂ ನಮೂದಿಸುತ್ತಾರೆಂದು ಜನ ಭಯಗೊಂಡಿದ್ದಾರೆ. ಆ ಭಯದಿಂದ ಗಲಾಟೆ ಮಾಡಿದ್ದಾರೆ. ಯಾರಿಗೂ ನೋಟಿಸ್ ಕೊಟ್ಟಿರಲಿಲ್ಲ, ಈಗ ಪರಿಸ್ಥಿತಿ ತಿಳಿಯಾಗಿದೆ ಎಂದು ಅವರು ತಿಳಿಸಿದ್ದಾರೆ.


Share It

You cannot copy content of this page