ಬೆಂಗಳೂರು: ರಸ್ತೆ ಬದಿಯಲ್ಲಿ ಪಾರ್ಟಿ ಮಾಡುತ್ಯಿದ್ದ ಯುವಕರನ್ಮು ಪ್ರಶ್ನೆ ಮಾಡಿದ್ದಕ್ಕೆ ದಂಪತಿಗೆ ಡ್ರಾಗರ್ ನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೇರೋಹಳ್ಳಿ ಬಳಿಯ ತುಂಗಾ ನಗರದಲ್ಲಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ತುಂಗಾ ನಗರದಲ್ಲಿ ಪರ್ನಿಶೀಂಗ್ ಅಂಗಡಿಯನ್ನಿಟ್ಟುಕೊಂಡಿರುವ ಶಿವಗಂಗೇಗೌಡ ಎಂಬುವವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಂಜೆ 7.30 ರ ಸುಮಾರಿನಲ್ಲಿ ನಾಲ್ಕೈದು ಯುವಕರು ಶಿವಗಂಗೇಗೌಡರ ಕಾರು ನಿಲ್ಲಿಸಿದ್ದ ಜಾಗದಲ್ಲಿ ಪಾರ್ಟಿ ಮಾಡುತ್ತಿದ್ದರು. ಇದನ್ನು ಗಮನಿಸಿದ ಗೌಡ, ಅಲ್ಲಿಂದ ಹೊರಡುವಂತೆ ಯುವಕರಿಗೆ ಹೇಳಿದ್ದಾರೆ. ಹೋಗ್ತೀವಿ ಅಂಕಲ್ ಎಂದುಕೊಂಡು, ಅಲ್ಲಿಯೇ ಸುಮಾರು ಮೂರು ಗಂಟೆಗಳ ಕಾಲ ಎಣ್ಣೆ ಪಾರ್ಟಿ ಮಾಡಿದ್ದಾರೆ.
ಅನಂತರ ಮತ್ತೇ ಪ್ರಶ್ನೆ ಮಾಡಿದ್ದಕ್ಕೆ ಡ್ರ್ಯಾಗರ್ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಆಗ ಮನೆಯೊಳಗೆ ಓಡಿಬಂದ ಶಿವಲಿಂಗೇಗೌಡರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಅವರ ಪತ್ನಿ ತಡೆಯಲು ಮುಂದಾದಾಗ ಆಕೆಯ ಮೇಲೆಯೂ ಹಲ್ಲೆ ನಡೆಸಿ, ಆಕೆಯನ್ನು ಮನಬಂದಂತೆ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ನಾಲ್ಕೈದು ಯುವಕರು ತಮ್ಮ ಜತೆಗೆ ಆಟೋದಲ್ಲಿ ಮತ್ತೆ ಕೆಲವರನ್ನು ಕರೆಸಿಕೊಂಡಿದ್ದು, ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಕಾರಿನ ಗಾಜು ಹೊಡೆದು ಬ್ಯಾಟ್ ನಿಂದ ಕಾರಿಗೆ ಬಡಿದಿದ್ದಾರೆ. ಅಕ್ಕಪಕ್ಕದ ಜನರು ಜಮಾಯಿಸುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈವರೆಗೆ ಪೊಲೀಸರು ನಾಲ್ವರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸರು ಸಮಯಕ್ಕೆ ಸರಿಯಾಗಿ ಸ್ಪಂದಿಸದಿರುವುದರಿಂದ ಕಿಡಿಗೇಡಿಗಳು, ರೌಡಿಗಳ ಅಟ್ಟಹಾಸ ಮಿತಿ ಮೀರಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.