ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರನ್ನು ಖಾಯಂಗೊಳಿಸಲು ಹೈಕೋರ್ಟ್ ಆದೇಶ
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಖಾಯಂಗೊಳಿಸುವಂತೆ ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
10 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ತಮ್ಮನ್ನು ಖಾಯಂಗೊಳಿಸಿಲ್ಲ. ಜತೆಗೆ ಸೂಕ್ತ ವೇತನವನ್ನೂ ಪಾವತಿಸುತ್ತಿಲ್ಲ. ಹೀಗಾಗಿ ತಮ್ಮ ಸೇವೆಯನ್ನು ಕಾಯಂಗೊಳಿಸುವಂತೆ ಅಂಗನವಾಡಿ ಕಾರ್ಯಕರ್ತೆಯರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ನಿಖಿಲ್ ಎಸ್ ಕರೀಲ್ ಅವರಿದ್ದ ಪೀಠ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಈ ನಿರ್ದೇಶನ ನೀಡಿದೆ.
1983-2010 ರ ನಡುವೆ ಕೇಂದ್ರದ ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ಯೋಜನೆ ಅಡಿಯಲ್ಲಿ ನೇಮಕಗೊಂಡ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರು ಹೈಕೋರ್ಟ್ ಮೆಟ್ಟಿಲೇರಿದ್ದರು ಈ ಅರ್ಜಿಗಳನ್ನು ಇತ್ಯರ್ಥಪಡಿಸುವ ವೇಳೆ ಅರ್ಜಿದಾರರಿಗೆ ಪಾವತಿಸುತ್ತಿರುವ 10 ಸಾವಿರ ಹಾಗೂ 5 ಸಾವಿರ ವೇತನ ಅತ್ಯಲ್ಪದ್ದಾಗಿದೆ ಎಂದು ಗುಜರಾತ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅಲ್ಲದೇ, ಕನಿಷ್ಟ 15 ಸಾವಿರ ವೇತನಕ್ಕೆ ಇವರು ಅರ್ಹರಿದ್ದಾರೆ ಎಂದಿರುವ ಹೈಕೋರ್ಟ್ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳನ್ನು ನಾಗರಿಕ ಸೇವೆ ವ್ಯಾಪ್ತಿಯಲ್ಲಿ ಪರಿಗಣಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.
ಹಾಗೆಯೇ, ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳನ್ನು ವರ್ಗ-3ರ ಅಡಿಯಲ್ಲಿ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗಳನ್ನು ವರ್ಗ-4ರ ಅಡಿಯಲ್ಲಿ ಪರಿಗಣಿಸಿ ವೇತನ ಪಾವತಿಸುವಂತೆ ನಿರ್ದೇಶಿಸಿರುವ ಹೈಕೋರ್ಟ್, ಅಂಗನವಾಡಿ ಕಾರ್ಯಕರ್ತೆಯರು-ಸಹಾಯಕಿಯರನ್ನು ಕಾಯಂಗೊಳಿಸಲು ಅಗತ್ಯ ನೀತಿ ರೂಪಿಸುವಂತೆ ಗುಜರಾತ್ ಸರ್ಕಾರಕ್ಕೆ ಆದೇಶಿಸಿದೆ.
(ಮೂಲ: LAW TIME)