ಕಡಲೂರು: ಮಗುವಿಗೆ ಸ್ನಾನ ಮಾಡಿಸಲು ಕಾಯಿಸಿದ್ದ ಬಿಸಿನೀರಿನ ಪಾತ್ರೆಯನ್ನು ಬೀಳಿಸಿಕೊಂಡು ಒಂದೂವರೆ ವರ್ಷದ ಮಗುವೊಂದು ಸುಟ್ಟ ಗಾಯಗಳಿಂದ ಸಾವನ್ನಪ್ಪಿರುವ ಘಟನೆ ಕಡಲೂರು ಜಿಲ್ಲೆಯ ವಲ್ಲಂ ಎಂಬಲ್ಲಿ ನಡೆದಿದೆ.
ಮರಗೆಲಸ ಮಾಡುವ ಪ್ರಭುದೇವ ಎಂಬುವವರ ಮಗು ಯಾಜಿನಿ ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಪ್ರಭುದೇವ ಪತ್ನಿ ಸೌಂದರ್ಗುವಿಗೆ ಸ್ನಾನ ಮಾಡಿಸುವ ಸಲುವಾಗಿ ನೀರಿಗೆ ಹೀಟರ್ ಬಳಸಿ ಬಿಸಿ ಮಾಡಿದ್ದರು. ಟವೆಲ್ ಮತ್ತು ಸೋಪ್ ರೆಡಿ ಮಾಡುವ ಸಲುವಾಗಿ ಸ್ನಾನದ ಮನೆಗೆ ಹೋಗಿದ್ದಾಗ ಮಗು ಬಿಸಿಯಾಗಿದ್ದ ಪಾತ್ರೆಯನ್ನು ತನ್ನ ಮೇಲೆ ಬೀಳಿಸಿಕೊಂಡಿದೆ ಎನ್ನಲಾಗಿದೆ.
ಮಗುವಿನ ಮೇಲೆ ನೀರು ಚೆಲ್ಲಿದ್ದು, ನಂತರ ನೆಲದ ಮೇಲೆ ಚೆಲ್ಲಿದ ನೀರಿನೊಳಗೆ ಮಗು ಬಿದ್ದಿದ್ದರಿಂದ ಮಗುವಿನ ಹಿಂಭಾಗ ಶೇ. 45 ರಷ್ಟು ದೇಹ ಸುಟ್ಟುಹೋಗಿತ್ತು. ಮಗುವಿನ ಕಿರುಚಾಟ ಕೇಳಿ ಓಡಿಬಂದ ತಾಯಿ, ನೆರೆಹೊರೆಯವರ ಸಹಾಯದಿಂದ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಪುದುಚೇರಿಯ ಮೆಡಿಕಲ್ ಕಾಲೇಜಿಗೆ ಮಗುವನ್ನು ಸಾಗಿಸಿದ್ದು, ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜವಾಹರಲಾಲ್ ಸ್ನಾತಕೋತ್ತರ ವೈದ್ಯಕೀಯ ಕಾಲೇಜಿಗೆ ರವಾನೆ ಮಾಡಲಾಯಿತು. ಆದರೆ, ಮಗುವನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ವೈದ್ಯರು ದೃಢಪಡಿಸಿದರು. ಮರಣೋತ್ತರ ಪರೀಕ್ಷೆ ನಡೆಸಿ ಮಗುವಿನ ಶವವನ್ನು ಪೋಷಕರಿಗೆ ಹಸ್ತಾಂತರ ಮಾಡಲಾಗಿದೆ. ಮುತಾಂಡಿಕುಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.