ಇಂದು ಹಾಸನದಲ್ಲಿ ಕೈ ಶಕ್ತಿ ಪ್ರದರ್ಶನ : ಜೆಡಿಎಸ್ ಹಣಿಯಲು ಮಾಸ್ಟರ್ ಪ್ಲ್ಯಾನ್ !
ಬೆಂಗಳೂರು: ಕಾಂಗ್ರೆಸ್ ಪಕ್ಷದ ಜನಕಲ್ಯಾಣ ಸ್ವಾಭಿಮಾನಿ ಸಮಾವೇಶ ಇಂದು ಹಾಸನದಲ್ಲಿ ನಡೆಯಲಿದ್ದು, ದೊಡ್ಡಗೌಡರ ಕೋಟೆಯಲ್ಲಿ ಕಾಂಗ್ರೆಸ್ ರಣಕಹಳೆ ಮೊಳಗಿಸಲಿದೆ.
ಸಮಾವೇಶದ ಮೂಲಕ ಹಳೇ ಮೈಸೂರು ಭಾಗ ದೇವೇಗೌಡರ ಭದ್ರಕೋಟೆ ಎಂಬ ಪಟ್ಟವನ್ನು ಹೊಡೆದುಹಾಕಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ರಾಮನಗರ ಜಿಲ್ಲೆಯಲ್ಲಿ ಈಗಾಗಲೇ ಜೆಡಿಎಸ್ ಮುಕ್ಯ ಮಾಡಿದ್ದು, ಅಂತಹದ್ದೇ ಪ್ರಯತ್ನವನ್ನು ಹಾಸನದಲ್ಲಿ ನಡೆಸಬೇಕು ಎಂಬುದು ಕಾಂಗ್ರೆಸ್ ನಾಯಕರ ಉದ್ದೇಶವಾಗಿದೆ.
ಸಮಾವೇಶದಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಜನರು ಭಾಗವಹಿಸಲಿದ್ದು, ಹಾಸನ, ಮಂಡ್ಯ, ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳಿಂದ ಜನರನ್ನು ಕರೆತರಲಾಗುತ್ತಿದೆ.
ಜನರನ್ನು ಕರೆತರಲು ಸುಮಾರು 13 ಸಾವಿರ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮ ಅರಸೀಕರೆ ರಸ್ತೆಯ ಎಸ್.ಎಂ.ಕೃಷ್ಣ ನಗರದ ಬೃಹತ್ ಮೈದಾನದಲ್ಲಿ ನಡೆಯಲಿದ್ದು, ಸಮಾವೇಶಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಸಾವಿರಾರು ಜನ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.
ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರು, ಸಂಸದರು ಹಾಗೂ ಶಾಸಕರು ಸೇರಿದಂತೆ ಪ್ರಮುಖ ಮುಖಂಡರು ಭಾಗವಹಿಸಲಿದ್ದಾರೆ.


