ಲಿವರ್ ಕೊಟ್ಟು ಗಂಡನ ಪ್ರಾಣ ಉಳಿಸಿದ್ದ ಮಹಿಳೆಯ ಜೀವ ತೆಗೆದ ಪುಷ್ಪ ಪ್ರೀಮಿಯರ್ ಶೋ !
ಹೈದರಾಬಾದ್:ಆಕೆ ಕರುಣಾಮಯಿ ತಾಯಿ, ತ್ಯಾಗಮಯಿ ಮಡದಿ, ಬಾಳಿ ಬದುಕಬೇಕಿದ್ದ 32 ವರ್ಷದ ಆ ಮಹಿಳೆಯನ್ನು ಬಲಿಪಡೆದಿದ್ದು ಮಾತ್ರ ಪುಷ್ಪ ಸಿನಿಮಾದ ಕ್ರೇಜು, ಛೇ..ಇದೆಂತಹ ದುರಂತ?
ಪುಷ್ಪ ಸಿನಿಮಾ ದೇಶಾದ್ಯಂತ ಭರ್ಜರಿ ಸದ್ದು ಮಾಡುತ್ತಿದೆ. ಆದರೆ, ನೈಟ್ ಶೋ ಹಡಸರಿನಲ್ಲಿ ಆಯೋಜಿಸಿದ್ದ ಪ್ರೀಮಿಯರ್ ಶೋನಲ್ಲಿ ಉಂಡಾದ ಕಾಲ್ತುಳಿತ ಒಬ್ಬ ಆದರ್ಶ ಮಹಿಳೆಯನ್ನು ಬಲಿ ಪಡೆದಿದೆ. ಆ ಮೂಲಕ ಪುಷ್ಪ ಸಿನಿಮಾ ನೋಡಲು ಹೋಗಿ ಕುಟುಂಬವೊಂದು ಬೀದಿಗೆ ಬಿದ್ದಿದೆ.
ಹೈದರಾಬಾದ್ ನ ಸಂಧ್ಯಾ ಥಿಯೇಟರ್ ನಲ್ಲಿ ಆಯೋಜಿಸಿದ್ದ ನೈಟ್ ಶೋನಲ್ಲಿ ಘಟನೆ ನಡೆದಿದೆ. ಅಲ್ಲು ಅರ್ಜುನ್ ಆಗಮಿಸುತ್ತಾರೆ ಎಂಬ ಕಾರಣಕ್ಕೆ ಉಂಟಾಗಿದ್ದ ಜನಜಂಗುಳಿ ಇದ್ದಕ್ಕಿದ್ದಂತೆ ದಿಕ್ಕಾಪಾಲಾಗಿ ಓಡಿ, ಕಾಲ್ತುಳಿತ ಉಂಟಾಗಿದೆ. ಇದರಲ್ಲಿ ರೇವತಿ ಎಂಬ 32 ವರ್ಷದ ಮಹಿಳೆ ಮೃತಪಟ್ಟಿದ್ದು, ಶ್ರೀ ಜೇಶ್ ಆಲಿಯಾಸ್ ಪುಷ್ಪ ಎಂಬ 9 ವರ್ಷದ ಪುಟ್ಟ ಬಾಲಕ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಶ್ರೀಜೇಶ್ ಪುಷ್ಪ-1 ನೋಡಿ ಅಲ್ಲು ಅರ್ಜುನ್ ಅಭಿಮಾನಿಯಾಗಿದ್ದ. ಅವರು ವಾಸಿಸುತ್ತಿದ್ದ ಪ್ರದೇಶದ ಜನರೆಲ್ಲ ಆತನನ್ನು ಪುಷ್ಪ ಎಂಬ ಹೆಸರಿನಿಂದಲೇ ಕರೆಯುತ್ತಿದ್ದರು. ಹೀಗಾಗಿ, ಪುಷ್ಪ- 2 ಶೋ ಗೆ ಅಲ್ಲು ಅರ್ಜುನ್ ಬರುತ್ತಾರೆಂದು ಹಠ ಮಾಡಿ ಅಪ್ಪ ಅಮ್ಮನನ್ನು ಕರೆದುತಂದಿದ್ದ. ಆದರೆ, ಅಲ್ಲಿ ನಡೆದ ಘಟನೆ ಆತನ ತಾಯಿಯನ್ನು ಬಲಿಪಡೆದಿದ್ದು, ಆತ ಕೂಡ ಆಸ್ಪತ್ರೆಯಲ್ಲಿ ನರಳುತ್ತಿದ್ದಾನೆ.
ಮಗುವಿನ ತಂದೆ ಭಾಸ್ಕರ್ ಗಾಂಧಿ ಆಸ್ಪತ್ರೆಯ ಶವಾಗಾರದ ಮುಂದೆ ಕುಳಿತು ರೋಧಿಸುತ್ತಾ, ಮಡದಿಯ ಮೃತದೇಹ ಪಡೆಯಲು ಪರದಾಡುತ್ತಿದ್ದಾನೆ. ಜತೆಗೆ, ಮತ್ತೊಂದು ಆಸ್ಪತ್ರೆಯಲ್ಲಿ ಮಗ ಹೈಫೋಕ್ಸಿಯಾ ಮತ್ತು ಶ್ವಾಸಕೋಶದ ಗಾಯಕ್ಕೊಳಗಾಗಿ ಬಿದ್ದಿರುವುದು ಆತನನ್ನು ಕಣ್ಣೀರಿನಲ್ಲಿ ಮುಳುಗಿಸಿದೆ.
ಕರುಣಾಮಯಿ ಮಡದಿ: ಭಾಸ್ಕರ್ ಪಿತ್ತಕೋಶದಿಂದ ಬಳಲುತ್ತಿದ್ದು, ಆತನಿಗೆ 2023 ರಲ್ಲಿ ಲಿವರ್ ಆಒರೇಷನ್ ಆಗಿತ್ತು. ಆತನ ಪತ್ನಿ ರೇವತಿ ಆತನಿಗೆ ಲಿವರ್ ದಾನ ಮಾಡಿ ದೇವತೆಯಾಗಿದ್ದರು. ಇದೀಗ ಜನಜಂಗುಳಿಯಲ್ಲಿ ಸಿಲುಕಿದ ಮಗನನ್ನು ಉಳಿಸುವ ಸಲುವಾಗಿ ಆಕೆ ತನ್ನ ಪ್ರಾಣವನ್ನೇ ಬಿಟ್ಟಿದ್ದಾಳೆ.
ಘಟನೆ ನಡೆದಿದ್ದೇಗೆ?: ಥಿಯೇಟರ್ ನಲ್ಲಿ ಜನಜಂಗುಳಿ ಹೆಚ್ಚಾಗುತ್ತಿದ್ದಂತೆ ಭಾಸ್ಕರ್ ಕಿರಿಯ ಪುತ್ರಿ ಅಳಲು ಶುರುಮಾಡಿದಳು. ಹೀಗಾಗಿ, ಹತ್ತಿರದ ಸಂಬಂಧಿಕರ ಮನೆಗೆ ಅವಳನ್ನು ಬಿಟ್ಟು ಬರುವುದಾಗಿ ಭಾಸ್ಕರ್ ತೆರಳಿದ್ದ. ಆಗ ಶ್ರೀಜೇಶ್ ಮತ್ತು ರೇವತಿ ಥಿಯೇಟರ್ ನಲ್ಲಿದ್ದರು. ವಾಪಸ್ ಬರುವಾಗ ಭಾಸ್ಕರ್ ಕರೆ ಮಾಡಿದ್ದ, ಥಿಯೇಟರ್ ಒಳಗೆ ಇರುವುದಾಗಿ ರೇವತಿ ತಿಳಿಸಿದ್ದಳು. ಇದೇ ನನ್ನ ಮಡದಿ ಜತೆ ನಾನಾಡಿದ ಕೊನೆಯ ಮಾತು ಎಂದು ಭಾಸ್ಕರ್ ಕಣ್ಣೀರಿಟ್ಟಿದ್ದಾನೆ.