ಚೆನ್ನೈ: ಇತ್ತೀಚೆಗೆ ಚೆಸ್ ವಿಶ್ವಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿದ ವಿಶ್ವದ ಅತ್ಯಂತ ಕಿರಿಯ ಚೆಸ್ ಆಟಗಾರ ಡಿ.ಗುಕೇಶ್ ಗೆ ತಮಿಳುನಾಡು ಸರಕಾರ5 ಕೋಟಿ ರುಪಾಯಿ ಬಹುಮಾನ ಘೋಷಿಸಿದೆ.
ಹಾಲಿ ವಿಶ್ವಚಾಂಪಿಯನ್ ಚೀನಾದ ಡಿಂಗ್ ಲಿರೇನ್ ಅವರನ್ನು ಗುರುವಾರ ದುಬೈನಲ್ಲಿ ನಡೆದ 14 ಸುತ್ತಿನ ಪಂದ್ಯದಲ್ಲಿ 7.5 ಪಾಯಿಂಟ್ಸ್ ಪಡೆದು ಗೆಲುವು ಸಾಧಿಸಿದ್ದರು. ಲಿರೇನ್ 6.5 ಪಾಯಿಂಟ್ಸ್ ಪಡೆದಿದ್ದರು. ಆ ಮೂಲಕ ಗುಕೇಶ್ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಆಗಿ ಇತಿಹಾಸ ಬರೆದರು.
ಈ ಹಿಂದೆ ರಷ್ಯಾದ ಗ್ಯಾರಿ ಕಾಸ್ ಪ್ರೋ ತಮ್ಮ 22 ವಯಸ್ಸಿನಲ್ಲಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಇತಿಹಾಸ ಬರೆದಿದ್ದರು. ಇದೀಗ 18 ನೇ ವಯಸ್ಸಿನಲ್ಲಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತದ ಡಿ.ಗುಕೇಶ್ ಅತ್ಯಂತ ಕಿರಿಯ ಚೆಸ್ ವಿಶ್ವ ಚಾಂಪಿಯನ್ ಆಗಿ ದಾಖಲೆ ಬರೆದಿದ್ದಾರೆ.
ಗುಕೇಶ್ ಭಾರತದ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ನಂತರ ವಿಶ್ವಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತದ ಎರಡನೇ ಆಟಗಾರರಾಗಿದ್ದಾರೆ. ವಿಶ್ವನಾಥನ್ ಆನಂದ್, 2013 ರಲ್ಲಿ ಮಾಗ್ನಸ್ ಕಾರ್ಲ್ ಸನ್ ವಿರುದ್ಧ ಸೋಲುವ ಮುನ್ನ ಐದು ಬಾರಿ ವಿಶ್ವ ಚಾಂಪಿಯನ್ ಆಗಿದ್ದರು.