ಬೆಂಗಳೂರು: ಬಿಎಂಟಿಸಿ ಸಿಬ್ಬಂದಿ ಮೇಲೆ ಇತ್ತೀಚೆಗೆ ಪದೇಪದೆ ಹಲ್ಲೆಗಳಾಗುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರಿಗೆ ಪತ್ರ ಬರೆದಿರುವ ಸಚಿವ ರಾಮಲಿಂಗಾ ರೆಡ್ಡಿ, ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕರ ಮೇಲೆ ಯಾವುದೇ ಹಲ್ಲೆ ನಡೆದರೆ, ತಕ್ಷಣವೇ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸುವಂತೆ ಸೂಚನೆ ನೀಡಿದ್ದಾರೆ.
ಕಳೆದೆರೆಡು ದಿನದ ಹಿಂದೆ ಟ್ಯಾನರಿ ರಸ್ತೆಯಲ್ಲಿ ಇಬ್ಬರು ಬೈಕ್ ಸವಾರರು ಬಿಎಂಟಿಸಿ ಬಸ್ ಅಡ್ಡಗಟ್ಟಿ ಚಾಲಕ ಮತ್ತು ನಿರ್ವಾಹಕರ ಮೇಲೆ ಹಲ್ಲೆ ನಡೆಸಿದ್ದರು. ಅ.24 ರಂದು ಮತ್ತೊಂದು ಘಟನೆಯಲ್ಲಿ ಬಿಎಂಟಿಸಿ ಸಿಬ್ಬಂದಿ ಮೇಲೆ ಹಲ್ಲೆ ನಡೆದಿತ್ತು. ಅ. 1 ರಂದು ನಡೆದ ಘಟನೆಯಲ್ಲಿ ನಿರ್ವಾಹಕನಿಗೆ ಚಾಕುವಿನಿಂದ ಚುಚ್ಚಿ ಗಂಭೀರವಾಗಿ ಗಾಯಗೊಳಿಸಲಾಗಿತ್ತು.
ಈ ಎಲ್ಲ ಘಟನೆಗಳ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತರಿಗೆ ಅದೇಶ ನೀಡಿರುವ ಸಚಿವ ರಾಮಲಿಂಗಾ ರೆಡ್ಡಿ, ತತಕ್ಷಣವೇ ಕಾನೂನು ಕ್ರಮ ಜರುಗಿಸುವಂತೆ ಆದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್, ಪೊಲೀಸ್ ಆಯುಕ್ತ ದಯಾನಂದ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸಿದರೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಬಿಎಂಟಿಸಿ ಸಿಬ್ಬಂದಿಯ ಸುರಕ್ಷತೆಗೆ ಆಧ್ಯತೆ ನೀಡಬೇಕು. ಕಾನೂನಿನ ಭಯ ಬಿಎಂಟಿಸಿ ಸಿಬ್ಬಂದಿ ಮೇಲೆ ಹಲ್ಲೆ ಮಾಡುವವರಿಗೆ ಮೂಡುವಂತೆ ಮಾಡಬೇಕು ಎಂದು ಚರ್ಚಿಸಲಾಗಿದೆ.
ಒಟ್ಟಾರೆ, ಕಳೆದೊಂದು ತಿಂಗಳಿಂದ ಮೂರು ಘಟನೆಗಳು ನಡೆದಿದ್ದು, ಇಂತಹದ್ದು ಮರುಕಳಿಸದಂತೆ ಸೂಚಿಸಲಾಗಿದೆ. ಸಚಿವರ ನಡೆಗೆ ಬಿಎಂಟಿಸಿ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದು, ಸಿಬ್ಬಂದಿ ಇನ್ನು ಮುಂದೆ ಭಯವಿಲ್ಲದೆ ಕೆಲಸ ಮಾಡಬಹುದು ಎಂದಿದ್ದಾರೆ.