ದಲಿತರನ್ನು ಬಿಡದ ದೇವಸ್ಥಾನ-ಶಾಲೆಗಳಿಗೆ ಬೀಗ ಹಾಕಿ: ಹೈಕೋರ್ಟ್ ನ್ಯಾಯಮೂರ್ತಿ
ಬೆಂಗಳೂರು: ‘ಯಾವ ಪ್ರದೇಶಗಳಲ್ಲಿ ದೇವಸ್ಥಾನ, ಕೆರೆ, ಶಾಲೆಗಳಿಗೆ ದಲಿತರನ್ನು ಬಿಡುವುದಿಲ್ಲವೋ ಅವುಗಳಿಗೆ ಬೀಗ ಹಾಕಿ. ನಮಗೆ ಇಲ್ಲದ್ದು ನಿಮಗೂ ಇಲ್ಲ ಎಂದು ಹೇಳಿ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಕೀಲರ ಸಂಘದ ಉದ್ಘಾಟನೆ ಹಾಗೂ 75ನೇ ಸಂವಿಧಾನ ಸಮರ್ಪಣಾ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಸಂವಿಧಾನಕ್ಕೆ 75 ವರ್ಷವಾದರೂ ಜಾತಿ ಬಗ್ಗೆ ಇನ್ನೂ ಮಾತನಾಡಲಾಗುತ್ತಿದೆ. ವ್ಯಕ್ತಿಯ ಪ್ರತಿಭೆಯಿಂದ ಕೃತಜ್ಞತೆ ಸಲ್ಲಿಸುವ ಮನೋಭಾವ ಬರಬೇಕು. ಜಾತಿ, ಧರ್ಮ ನೋಡಬಾರದು. ಶೋಷಿತ ಸಮುದಾಯದವರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ, ಭಾರತದ ರಾಷ್ಟ್ರಪತಿಯಾಗಿದ್ದಾರೆ. ಪ್ರಧಾನಿಯಾಗುವ ಕಾಲ ಬರಬೇಕು’ ಎಂದರು.
‘ಭಗವದ್ಗೀತೆ, ರಾಮಾಯಣ, ಮಹಾಭಾರತ, ವೇದಗಳನ್ನು ಮನೆಯಲ್ಲಿ ಪೂಜೆ ಮಾಡುತ್ತೇವೆ. ಆದರೆ, ಅವುಗಳನ್ನು ರಚಿಸಿದವರ ಸಮುದಾಯದವರನ್ನು ಮನೆಯೊಳಗೆ ಬಿಟ್ಟುಕೊಳ್ಳದಿರುವ ಮನಸ್ಥಿತಿ ಇನ್ನೂ ಇರುವುದು ವಿಪರ್ಯಾಸ’ ಎಂದು ಅಭಿಪ್ರಾಯಪಟ್ಟರು.
ಮೈಸೂರಿನ ಉರಿಲಿಂಗಪೆದ್ದಿ ಮಹಾಸಂಸ್ಥಾನ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ‘ಡಾ.ಬಿ.ಆರ್. ಅಂಬೇಡ್ಕರ್ ಅವರು ಭಾರತೀಯರಿಗೆ ನೀಡಿದ ಸಂವಿಧಾನ ದಾಖಲೆ ಪುಸ್ತಕವಲ್ಲ, ಅದು ಭಾರತೀಯರ ಮನಸ್ಸಿನ ಸಂವೇದನೆ. ಯಾವುದೇ ದೇಶ ಧರ್ಮ ಆಧಾರಿತ, ಜಾತಿ ಆಧಾರಿತವಾದರೆ ಸ್ವಾತಂತ್ರ್ಯ ಕಳೆದುಕೊಳ್ಳುತ್ತದೆ. ವ್ಯಕ್ತಿಪೂಜೆ ಅಪಾಯಕಾರಿ. ಸರ್ವಾಧಿಕಾರಿ ಧೋರಣೆಯಿಂದ ದೇಶದ ಅಖಂಡತೆಗೆ ಧಕ್ಕೆಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ಹೈಕೋರ್ಟ್ ನ್ಯಾಯಮೂರ್ತಿ ಕೆ. ಸೋಮಶೇಖರ್ ಮಾತನಾಡಿ, ‘ಸಂವಿಧಾನದ ಬಗ್ಗೆ ನಮಗೆ ಎಷ್ಟು ಪ್ರಬುದ್ಧತೆ ಇದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲು ನವೆಂಬರ್ 26ರಂದು ಸಮರ್ಪಣಾ ದಿನ ಆಚರಿಸಲಾಗುತ್ತದೆ. ಸಂವಿಧಾನವನ್ನು ಅರಿತಿದ್ದರೆ ಎಷ್ಟು ತಿಳಿದಿದ್ದೇವೆ ಎಂಬುದು ಮುಖ್ಯ. ಅರಿವಿಲ್ಲದಿದ್ದರೆ ಕಲಿಯುವ ಪ್ರಯತ್ನವಾಗಬೇಕು. ಇದಕ್ಕೆಲ್ಲ ವಿದ್ಯೆ ಅಗತ್ಯ. ಜ್ಞಾನ ಎಂಬುದು ಯಾರೂ ಕದಿಯಲಾಗದ ಸಂಪತ್ತು. ಅದನ್ನು ಎಲ್ಲರೂ ಗಳಿಸಬೇಕು’ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಕೀಲರ ಸಂಘದ ಅಧ್ಯಕ್ಷ ಎಂ. ಮುನಿಯಪ್ಪ, ಅಖಿಲ ಭಾರತ ವಕೀಲರ ಸಂಘದ ಅಧ್ಯಕ್ಷ ಭಕ್ತವಚ್ಚಲ, ಹೈಕೋರ್ಟ್ ಹೆಚ್ಚುವರಿ ಅಡ್ವಕೇಟ್ ಜನರಲ್ ಎಸ್.ಎ. ಅಹಮದ್ ಮತ್ತಿತರರು ಉಪಸ್ಥಿತರಿದ್ದರು.