ಬಸ್ ಸೀಟಿಗಾಗಿ ದಂಪತಿ ಮೇಲೆ ಯುವಕರಿಂದ ಹಲ್ಲೆ : ಕೈಮುಗಿದು ಕಣ್ಣೀರಿಟ್ಟಳು ಬಾಲೆ
ಬೆಳಗಾವಿ : ಬಸ್ ಸೀಟಿಗಾಗಿ ಜಗಳ ವಿಕೋಪಕ್ಕೆ ತಿರುಗಿ ಗಲಾಟೆ ನಡೆದಿದ್ದು, ಹೊರಟಿದ್ದ ಬಸ್ ತಡೆದು ಗಂಡ ಹಾಗೂ ಗರ್ಭಿಣಿಗೆ ಅನ್ಯ ಕೋಮಿನ ಯುವಕರ ಗುಂಪು ಮನಸೋ ಇಚ್ಚೆ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಹುಕ್ಕೇರಿ ತಾಲೂಕಿನ ಮಸರಗುಪ್ಪಿ ಗ್ರಾಮದ ಬಳಿ ಸೋಮವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ.
ತನ್ನ ತಂದೆ- ತಾಯಿಯನ್ನು ಹೊಡೆಯುತ್ತಿದ್ದಾರೆ ಎಂದು ಹಲ್ಲೆಗೆ ಒಳಗಾದ ದಂಪತಿಯ ಪುಟ್ಟ ಮಗಳು ಬಸ್ಸಿನಲ್ಲಿದ್ದವರ ಮುಂದೆ ಕೈಮುಗಿದು ಪರಿ ಪರಿಯಾಗಿ ಬೇಡಿಕೊಂಡ ಘಟನೆ ಮನಕರಗಿಸುವಂತೆ ಮಾಡಿದೆ.
ಸಂಕೇಶ್ವರ ಬಸ್ ನಿಲ್ದಾಣದಲ್ಲಿ ಗೋಕಾಕಕ್ಕೆ ಹೊರಟಿದ್ದ ಬಸ್‌ನಲ್ಲಿ ಜನಜಂಗುಳಿ ಇತ್ತು. ಈ ಸಂದರ್ಭದಲ್ಲಿ ತನ್ನ ಪತ್ನಿ ಗರ್ಭಿಣಿ ಇದ್ದಾಳೆ ಎನ್ನುವ ಕಾರಣದಿಂದ ಸೀಟು ಹಿಡಿದಿದ್ದ ಪತಿ ಹಾಗೂ ಪಕ್ಕದಲ್ಲಿದ್ದ ಅನ್ಯ ಕೋಮಿನ ಮಹಿಳೆಯರು ಸೀಟಿಗಾಗಿ ತಂಟೆ ತೆಗೆದಿದ್ದರು. ಬಳಿಕ ಬಸ್ಸು ಹೊರಟು ಹುಕ್ಕೇರಿ ತಾಲೂಕಿನ ನೇರ್ಲಿ-ಮಸರಗುಪ್ಪಿ ಗ್ರಾಮದ ನಡುವೆ ಹೋಗುತ್ತಿದ್ದಂತೆ ಜಗಳ ವಿಕೋಪ ಹಾದಿ ಹೋಯಿತು. ಗೋಕಾಕ ತಾಲೂಕಿನ ಸಿಂಧಿಕುರಬೇಟ ಗ್ರಾಮದ ಅನ್ಯ ಕೋಮಿನ ಮಹಿಳೆಯರು ತಮ್ಮ ಮನೆಯವರಿಗೆ ಕರೆ ಬರಲು ಹೇಳಿದ್ದಾರೆ.
ಕರೆ ಮಾಡಿದ ಹಿನ್ನಲೆಯಲ್ಲಿ ಸಿನಿಮೀಯ ರೀತಿಯಲ್ಲಿ ಬಂದು ಬಸ್ಸು ತಡೆದ ಸುಮಾರು 12ರಿಂದ 15 ಜನರಿದ್ದ ಅನ್ಯ ಕೋಮಿನ ಯುವಕರ ತಂಡವು ಬೈಕ್ ಮೇಲೆ ಬಂದು ಮಸರಗುಪ್ಪಿ ಕ್ರಾಸ್ ಬಳಿ ಬಸ್ ಅಡ್ಡಗಟ್ಟಿ ಗರ್ಭಿಣಿ ಮಹಿಳೆ ಹಾಗೂ ಪತಿಗೆ ಮನಸೋ ಇಚ್ಚೆ ಹೊಡೆದಿದ್ದಾರೆ. ನನ್ನ ತಂದೆ-ತಾಯಿಗೆ ತುಂಬಾ ಹೊಡೆದಿದ್ದಾರೆ ಎಂದು ಕಣ್ಣೀರು ಹಾಕುತ್ತ ಬಸ್ಸಿನಲ್ಲಿದ್ದ ಪ್ರಯಾಣಿಕರ ಮುಂದೆ ಹಲ್ಲೆಗೆ ಒಳಗಾದ ದಂಪತಿಯ ಪುಟ್ಟ ಮಗಳು ಪರಿ ಪರಿಯಾಗಿ ಹೇಳುತ್ತ ತಿರುಗುತ್ತಿದ್ದ ದೃಶ್ಯವಂತೂ ಎಲ್ಲರ ಮನ ಕರಗುವಂತೆ ಮಾಡಿತು.
ಹುಕ್ಕೇರಿ ತಾಲೂಕಿನ ಮಸರಗುಪ್ಪಿ ಕ್ರಾಸ್ ಬಳಿ ಈ ಘಟನೆ ನಡೆದಿದೆ.
ಪತಿಯನ್ನು ಯುವಕರು ಹೊಡೆಯುತ್ತಿದ್ದಂತೆ ನನ್ನ ಪತಿಗೆ ಹೊಡೆಯ ಬೇಡಿ ಎಂದು ಬಿಡಿಸಲು ಹೋದ ಪತ್ನಿಗೂ ಹೊಡೆದಿದ್ದಾರೆ. ಆದರೆ ಸಿಟಿಗಾಗಿ ಬಸ್ಸಿನಲ್ಲಿ ಆದ ಒಂದು ಸಣ್ಣ ಜಗಳ ವಿಕೋಪಕ್ಕೆ ತಿರುಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಈ ಘಟನೆಯಲ್ಲಿ ಪರಪ್ಪ ಶಿವಪ್ಪ ನಾಶಿಪುಡಿ ಇವರ ಪತ್ನಿ ಸುನೀತಾ ಪರಪ್ಪ ನಾಶಿಪುಡಿ ಎಂಬವರ ಮೇಲೆ ಹಲ್ಲೆ ಮಾಡಲಾಗಿದೆ. ಪತಿ ಹಾಗೂ ಪತ್ನಿ ಇಬ್ಬರನ್ನು ಬಸ್ಸಿನಿಂದ ಕೆಳಗೆ ಎಳೆದು ಮನ ಬಂದಂತೆ ಹೊಡೆದಿದ್ದಾರೆ. ಪರಸಪ್ಪ ತನ್ನ ಪತ್ನಿ ಗರ್ಭಿಣಿ ಅಂತಾ ಹೇಳಿದರೂ ಲೆಕ್ಕಿಸದೆ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಸಂಕೇಶ್ವರ ಪೋಲಿಸರು ವಿಚಾರಣೆ ನಡೆಸುತ್ತಿದ್ದಾರೆ