ಹುಬ್ಬಳ್ಳಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಎಂಎಲ್ಸಿ ಸಿ.ಟಿ.ರವಿ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಟಿ ರವಿ ಅವರು ಅಶ್ಲೀಲ ಪದ ಬಳಸಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಇನ್ನೂ ಕೆಲವರು ಸಿಟಿ ರವಿ ಅವರು ಅಶ್ಲೀಲ ಪದ ಬಳಸಿಲ್ಲ ಅಂತ ಹೇಳಿದ್ದಾರೆ. ಹೀಗಾಗಿ, ಸತ್ಯಾಸತ್ಯತೆ ತಿಳಿಯಲು ಸಿಐಡಿ ತನಿಖೆಗೆ ಆದೇಶ ಮಾಡಿದ್ದೇನೆ. ಸಭಾಪತಿ ತಮ್ಮ ಕೆಲಸ ಮಾಡಿದ್ದಾರೆ, ಪೊಲೀಸರು ತನಿಖೆ ಮಾಡಬೇಕು ಎಂದರು.
ಅಸಮರ್ಥ ಗೃಹ ಸಚಿವ ಎಂಬ ಪ್ರಹ್ಲಾದ್ ಜೋಶಿ ಹೇಳಿಕೆಗೆ ಡಾ.ಜಿ.ಪರಮೇಶ್ವರ್ ತಿರುಗೇಟು ನೀಡಿದರು. ಪ್ರಹ್ಲಾದ್ ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ. ನಾನು ಜೋಶಿ ಅವರನ್ನು ಅಸಮರ್ಥ ಕೇಂದ್ರ ಸಚಿವ ಎಂದು ಹೇಳಬಹುದು. ಆದರೆ, ಅದು ಎಷ್ಟು ಸಮಂಜಸ ಹೇಳಿ? ಎಂದರು.