ಉಪಯುಕ್ತ ರಾಜಕೀಯ ಸುದ್ದಿ

ಬೆಂಗಳೂರು ವ್ಯಾಪ್ತಿಯ ಕಂದಾಯ ಪ್ರಕರಣಗಳ ತ್ವರಿತ ವಿಲೇವಾರಿಗೆ 18 ವಿಶೇಷ ಉಪವಿಭಾಗಾಧಿಕಾರಿಗಳ ನೇಮಕ

Share It

ಬೆಂಗಳೂರು: ಬೆಂಗಳೂರು ವ್ಯಾಪ್ತಿಯಲ್ಲಿ ಜಮೀನುಗಳ ವ್ಯಾಜ್ಯಗಳ ವಿಲೇವಾರಿ ವಿಳಂಬವಾಗತ್ತಿದ್ದು, ತ್ವರಿತ ವಿಲೇವಾರಿಗಾಗಿ 18 ಉಪವಿಭಾಗಾಧಿಕಾರಿಗಳ ನೇಮಕಕ್ಕೆ ಸರಕಾರ ಮುಂದಾಗಿದೆ.

ತಹಶೀಲ್ದಾರ್ -DC ಕೋರ್ಟ್ ಗಳಲ್ಲಿ ಪ್ರಕರಣಗಳು ಸಮರೋಪಾದಿಯಲ್ಲಿ ವಿಲೇವಾರಿ ಆಗುತ್ತಿದೆ. ಆದರೆ ಉಪ ವಿಭಾಗಾಧಿಕಾರಿ ನ್ಯಾಯಾಲಯಗಳಲ್ಲಿ ವಿಲೇವಾರಿ ವೇಗ ಕಡಿಮೆ ಇರುವುದನ್ನು ತಾಂತ್ರಿಕ  ಕಾರಣಗಳ ಸಮೇತ ಸಚಿವ ಕೃಷ್ಣಬೈರೇಗೌಡರು ಸಿಎಂ ಗೆ ವಿವರಿದರು.

ಇದನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು. ಉಪವಿಭಾಗಾಧಿಕಾರಿ ನ್ಯಾಯಾಲಯಗಳ ಕಾರ್ಯವೈಖರಿ ಸುಧಾರಿಸಬೇಕು. ಈ ಬಗ್ಗೆ ಉಪ ವಿಭಾಗಾಧಿಕಾರಿಗಳಿಗೆ ಕೊನೆಯ ಎಚ್ಚರಿಕೆ ಕೊಡಿ ಎಂದು ಸಿಎಂ ಸೂಚಿಸಿದರು.
ಅನಂತರ ತ್ವರಿತ ವಿಲೇವಾರಿ ಗಾಗಿ ಬೆಂಗಳೂರು ವ್ಯಾಪ್ತಿಯಲ್ಲಿ ಹೆಚ್ಚುವರಿ18 ಉಪವಿಭಾಗಾಧಿಕಾರಿಗಳ ನೇಮಕಕ್ಕೆ ಸಿಎಂ ಸಿದ್ದರಾಮಯ್ಯ ಅನುಮತಿ ನೀಡಿದರು. ಶೀಘ್ರದಲ್ಲೇ ಉಪವಿಭಾಗಾಧಿಕಾರಿಗಳನ್ನು ನೇಮಿಸಿ, ಪ್ರಕರಣಗಳ ತ್ವರಿತ ವಿಲೇವಾರಿಗೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.

ಜಿಲ್ಲಾಧಿಕಾರಿ ನ್ಯಾಯಾಲಯಗಳಲ್ಲಿ 9947 ಒಂದು ವರ್ಷಕ್ಕೂ ಅಧಿಕ ಅವಧಿಯಿಂದ ಬಾಕಿಯಿತ್ತು. ಈಗ ಇದರ ಪ್ರಮಾಣ ಕೇವಲ 6 ಸಾವಿರಕ್ಕೆ ಇಳಿದಿದೆ. ಜಮೀನು ಖಾತೆಗೆ ಆಧಾರ್ ಸೀಡಿಂಗ್‌ ಮಾಡಲಾಗುತ್ತಿದೆ. ರಾಜ್ಯದಲ್ಲಿ ಇದುವರೆಗೆ 2.22 ಕೋಟಿ ಖಾತೆಗಳಿಗೆ ಆಧಾರ ಸೀಡಿಂಗ್‌ ಮಾಡಲಾಗಿದ್ದು, ಇದರಿಂದ ನಕಲಿ ದಾಖಲೆ ಸೃಷ್ಟಿಸುವುದನ್ನು ತಡೆಯಲು ಸಾಧ್ಯವಾಗಿದೆ. ಭೂ ಪರಿವರ್ತನೆಯಾಗದೆ ವಾಣಿಜ್ಯ ಉದ್ದೇಶಗಳಿಗೆ ಜಮೀನು ಬಳಕೆ ಪ್ರಕರಣಗಳನ್ನು ಪತ್ತೆ ಹಚ್ಚಲು ಇದರಿಂದ ಸಾಧ್ಯವಾಗಿದೆ.

ಅನಧಿಕೃತ ಬಡಾವಣೆಗಳಿಗೆ ಖಾತಾ ನೀಡುವುದನ್ನು ಸ್ಥಗಿತಗೊಳಿಸಲು ಈಗಾಗಲೇ ಸೂಚನೆ ನೀಡಿದ್ದೇವೆ. ಒಂದು ಅವಧಿಗೆ ಬಿ ಖಾತಾ ನೀಡುವ ಪ್ರಕ್ರಿಯೆ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ, ಇನ್ನು ಮುಂದೆ ಅನಧಿಕೃತ ಬಡಾವಣೆಗಳು ತಲೆ ಎತ್ತದಂತೆ ನೋಡಿಕೊಳ್ಳಬೇಕು ಎನ್ನುವ ಸೂಚನೆ ನೀಡಿದರು.

ರಾಜ್ಯದಲ್ಲಿ ಹಲವು ಪ್ರಕರಣಗಳಲ್ಲಿ ಜಮೀನುಗಳ ಖಾತೆ ಇನ್ನೂ ನಿಧನ ಹೊಂದಿದವರ ಹೆಸರಿನಲ್ಲಿಯೇ ಇದೆ. ಪೌತಿ ಖಾತೆ ಅಭಿಯಾನದ ಮೂಲಕ ಮಾಲಿಕರ ಹೆಸರಿಗೆ ಜಮೀನು ನೋಂದಣಿ ಕಾರ್ಯವನ್ನು ತ್ವರಿತಗೊಳಿಸಬೇಕು ಎನ್ನುವ ಸೂಚನೆ ನೀಡಿದರು.


Share It

You cannot copy content of this page