ಬೆಂಗಳೂರು: ಸರಕಾರ ಮೈಕ್ರೋ ಫೈನಾನ್ಸ್ ಕಿರುಕುಳದ ವಿರುದ್ಧ ಸುಗ್ರೀವಾಜ್ಞೆ ತರಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಸಿಎಂ ಸಿದ್ದರಾಮಯ್ಯ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಜಾರಿ ತಡೆಯಾಗಲಿದೆ.
ಮೈಕ್ರೋ ಫೈನಾನ್ಸ್ ಕಿರುಕುಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಜಾರಿಗೊಳಿಸುವ ನಿರ್ಧಾರಕ್ಕೆ ಸಚಿವ ಸಂಪುಟ ಬಂದಿತ್ತು. ಚರ್ಚೆಯ ನಂತರ ಅಂತಿಮ ತೀರ್ಮಾನವನ್ನು ಸಿಎಂ ವಿವೇಚನೆಗೆ ಬಿಡಲಾಗಿತ್ತು. ಅನಂತರ ಸುಗ್ರೀವಾಜ್ಞೆಯ ರೂಪುರೇಷೆಗಳನ್ನು ತಯಾರಿಸಲು ಕಂದಾಯ, ಗೃಹ ಹಾಗೂ ಕಾನೂನು ಮತ್ತು ಆರ್ಥಿಕ ಇಲಾಖೆಯ ಅಧಿಕಾರಿಗಳ ಸಭೆ ನಡೆಸಲಾಗಿತ್ತು.
ಸಭೆಯ ನಂತರ ಕೆಲವು ಶಿಫಾರಸುಗಳನ್ನು ಕಾಯಿದೆಯಲ್ಲಿ ಜಾರಿಗೊಳಿಸುವ ನಿರ್ಧಾರಕ್ಕೆ ಸರಕಾರ ಬಂದಿದೆ. ಆದರೆ, ಕಾಯಿದೆಯನ್ನು ಅಂತಿಮಗೊಳಿಸಲು ಸಿಎಂ ಅಂತಿಮ ತೀರ್ಮಾನಕ್ಕೆ ಕಾಯಲಾಗುತ್ತಿದೆ. ಸಿಎಂ ಸಧ್ಯ ಕಾಲು ನೋವಿನ ಕಾರಣಕ್ಕೆ ರೆಸ್ಟ್ ನಲ್ಲಿದ್ದು, ಇನ್ನೆರಡು ದಿನದಲ್ಲಿ ಕಾರ್ಯಪ್ರವೃತ್ತರಾಗಲಿದ್ದಾರೆ. ಈ ವೇಳೆ ಸುಗ್ರೀವಾಜ್ಞೆ ಘೋಷಣೆ ಸಾಧ್ಯತೆ ಇದೆ.