ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರಿಂದ ಹಸಿರು ನಿಶಾನೆ
ಬೆಂಗಳೂರು: ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆಯ ಕುರಿತು ಅರಿವು ಮೂಡಿಸಲು ಮತ್ತು ರಸ್ತೆಗಳನ್ನು ಸುರಕ್ಷಿತಗೊಳಿಸುವ ಉದ್ದೇಶದೊಂದಿಗೆ
ಪೋಲೀಸ್ ಇಲಾಖೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಮಾ.1ರಂದು ಬೆಳಗ್ಗೆ 5ರಿಂದ 8 ಗಂಟೆವರೆಗೆ ಸಾರಿಗೆ ಇಲಾಖೆಯ ವತಿಯಿಂದ 5 ಕಿ.ಮೀ ‘ಸೇಫಾಥಾನ್-2025’ ಆಯೋಜಿಸಲಾಗಿದೆ.
ನಗರದ ಕಂಠೀರವ ಕ್ರೀಡಾಂಗಣದಲ್ಲಿ ಮಾ.1ರ ಬೆಳಗ್ಗೆ 5 ಗಂಟೆಗೆ ನಡೆಯಲಿರುವ ಸೇಫಾಥಾನ್‌ಗೆ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಹಸಿರು ನಿಶಾನೆ ತೋರಿಸಲಿದ್ದಾರೆ. ನಗರದ ವಿವಿಧ ಖಾಸಗಿ ಸಂಘ-ಸಂಸ್ಥೆಗಳು ಕೂಡ ಸೇಫಾಥಾನ್‌ಗೆ ಕೈ ಜೋಡಿಸಿವೆ. ಸೇಫಾಥಾನ್‌ನಲ್ಲಿ ನಡಿಗೆ, ಓಟ ಮತ್ತು ಸೈಕ್ಲಾಥಾನ್ ಕೂಡ ಇರಲಿದೆ. ಸಾರ್ವಜನಿಕರು, ವಿದ್ಯಾರ್ಥಿಗಳು, ಉದ್ಯೋಗಿಗಳು ಸೇರಿದಂತೆ ಯಾರು ಬೇಕಾದರೂ ಸೇಫಾಥಾನ್‌ನಲ್ಲಿ ಭಾಗವಹಿಸಬಹುದು. ಹೆಸರು ನೋಂದಣಿ ಮಾಡಿಕೊಳ್ಳಲು ಭೇಟಿ ನೀಡಬೇಕಾದ ವಿಳಾಸ.
www.saferoadskarnataka.com
ಇನ್ನು ಜಾಗೃತಿ ಮೂಡಿಸಲು ಸಾರ್ವಜನಿಕರು, ವಿದ್ಯಾರ್ಥಿಗಳ ಜೊತೆಗೆ ವಿವಿಧ ಸಾಂಸ್ಕೃತಿಕ ತಂಡಗಳು ಕೂಡ ಸೇಫಾಥಾನ್ ನಲ್ಲಿ ಭಾಗವಹಿಸುತ್ತಿದ್ದು, ವಿವಿಧ ರೀತಿಯಲ್ಲಿ ಜಾಗೃತಿ ಸಂದೇಶವನ್ನು ತಲುಪಿಸಲಿವೆ.
ಸೇಫಾಥಾನ್-2025 ಕುರಿತು ಮಾತನಾಡಿದ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ಶ್ರೀ ರಾಮಲಿಂಗಾರೆಡ್ಡಿ ಅವರು, ‘ರಸ್ತೆ ಸುರಕ್ಷತೆಗೆ ಜಾಗೃತಿ ಮತ್ತು ಎಚ್ಚರಿಕೆಯೇ ಪರಿಹಾರ. ವಾಹನ ಚಲಾಯಿಸುವಾಗ ಅಥವಾ ಮನೆಯಿಂದ ಹೊರ ಬಂದು ಓಡಾಡುವಾಗ ನಾವು ಎಚ್ಚರಿಕೆಯಿಂದ ಇರಬೇಕು. ವಿಶೇಷವಾಗಿ ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವಾಗ ಅಕ್ಕ ಪಕ್ಕದಲ್ಲಿ, ಎದುರು ಬರುವ ವಾಹನಗಳು, ಅಡ್ಡ ಬರುವ ವಾಹನಗಳ ಕುರಿತು ನಿಗಾ ವಹಿಸಬೇಕು. ವೇಗ ಮಿತಿ ಕಾಪಾಡಿಕೊಳ್ಳಬೇಕು. ಸಾರ್ವಜನಿಕರು ರಸ್ತೆ ದಾಟುವ ಕಡೆ, ಸಿಗ್ನಿಲ್, ದಟ್ಟಣೆ ಪ್ರದೇಶಗಳಲ್ಲಿ ಹೆಚ್ಚಿನ ಜಾಗೃತಿ ವಹಿಸುವುದರಿಂದ ಸಾರ್ವಜನಿಕರು ಮತ್ತು ನಮ್ಮ ಜೀವವನ್ನು ಸುರಕ್ಷಿತವಾಗಿರಿಸಲು ಸಾಧ್ಯವಾಗುತ್ತದೆ’ ಎಂದರು.
ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್. ವಿ. ಪ್ರಸಾದ್, ಆಯುಕ್ತ ಯೋಗೀಶ್ ಮತ್ತು
ಉಪಆಯುಕ್ತ ಮಲ್ಲಿಕಾರ್ಜುನ ಮತ್ತು ಇತರರು ಉಪಸ್ಥಿತರಿದ್ದರು.