ಆರ್.ಓ.ಗಳ ನಿರ್ವಹಣೆ ಜಲಮಂಡಳಿ ಸುಪರ್ದಿಗೆ: ಡಿಸಿಎಂ ಸೂಚನೆ

Share It

ಬೆಂಗಳೂರು : ಇನ್ಮುಂದೆ ಆರ್​​ಒ ಪ್ಲಾಂಟ್​​ಗಳ ನಿರ್ವಹಣೆಯನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸುಪರ್ದಿಗೆ ನೀಡಲಾಗಿದೆ. ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಆದೇಶ ಹಿನ್ನೆಲೆ ಬೆಂಗಳೂರು ಜಲಮಂಡಳಿಗೆ ಹಸ್ತಾಂತರಿಸಲು ರಾಜ್ಯಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಇಲಾಖೆಗೆ ಸೂಚನೆ ನೀಡಲಾಗಿದೆ.

ಬೆಂಗಳೂರಿನ ಜನರಿಗೆ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಕಲ್ಪಿಸುವುದು, ನೀರು, ಒಳಚರಂಡಿ ವ್ಯವಸ್ಥೆಯ ಜವಾಬ್ದಾರಿಯನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಿಸುತ್ತಿದೆ. ಸದ್ಯ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯನ್ನು ಬಿಬಿಎಂಪಿ ನಿರ್ವಹಣೆ ಮಾಡುತ್ತಿದೆ.

ಒಂದು ವೇಳೆ ಕೊಳವೆ ಬಾವಿಗಳು ಬತ್ತಿ ಹೋದಲ್ಲಿ ಆರ್​​ಒ ಘಟಕಕ್ಕೆ ಬೇಕಾಗುವ ನೀರನ್ನು ಜಲಮಂಡಳಿ ಮೂಲಕವೇ ಪೂರೈಸಬೇಕಾಗುತ್ತದೆ. ಈ ವೇಳೆ ಸಮನ್ವಯದ ಕೊರತೆ ಉಂಟಾಗಿ, ನಾಗರಿಕರಿಗೆ ತೊಂದರೆ ಆಗುವುದನ್ನು ತಪ್ಪಿಸುವ ದೃಷ್ಟಿಯಿಂದ ಹಾಗೂ ಬೆಂಗಳೂರು ನಗರದ ನೀರು ಸರಬರಾಜಿನ ನಿರ್ವಹಣೆ ಮಾಡುತ್ತಿರುವ ಜಲಮಂಡಳಿಯವರೇ RO ಪ್ಲಾಂಟ್‌ಗಳ ನಿರ್ವಹಣೆ ಮಾಡುವುದು ಸೂಕ್ತ. ಹೀಗಾಗಿ ಕೂಡಲೇ ಆರ್​ಒ ಪ್ಲಾಂಟ್ ಜಲಮಂಡಳಿ ಸುಪರ್ದಿಗೆ ನೀಡಲು ಡಿಸಿಎಂ ಡಿ.ಕೆ ಶಿವಕುಮಾರ್​ ಸೂಚನೆ ನೀಡಿದ್ದಾರೆ.

ಜಲಮಂಡಳಿಯು ಈಗಾಗಲೇ ನೀರಿನ ಗುಣಮಟ್ಟವನ್ನು ಪರೀಕ್ಷಿಸಲು ತನ್ನದೇ ಆದ ಲ್ಯಾಬ್​ ಹೊಂದಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇತ್ತೀಚೆಗೆ ಹೇಳಿದ್ದರು. ಬೆಂಗಳೂರಿನ ನೀರಿನ ಗುಣಮಟ್ಟ ಮತ್ತು ಪರಿಸ್ಥಿತಿಯ ಬಗ್ಗೆ ಜಲಮಂಡಳಿಗೆ ಸಮಗ್ರ ತಿಳುವಳಿಕೆ ಇರುವುದರಿಂದ ಬೇಸಿಗೆ ಆರಂಭಕ್ಕೂ ಮುಂಚಿತವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇನ್ನು ನೀರಿಗೆ ಸಂಬಂಧಿಸಿದ ಯೋಜನೆಗಳಿಗಾಗಿ ನಾವು ಕೇಂದ್ರದಿಂದ ಪಡೆಯುವ ಹಣವನ್ನು ಬೆಂಗಳೂರು ಜಲಮಂಡಳಿಯೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ‌ತುಷಾರ್ ಗಿರಿನಾಥ್ ಹೇಳಿದ್ದರು.


Share It

You May Have Missed

You cannot copy content of this page