ರಾಜ್ಯ ಬಿಜೆಪಿ ಬಣ ಬಡಿದಾಟಕ್ಕೆ ಅಂತ್ಯ ಹಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ದೃಢ ನಿರ್ಧಾರ ತಳೆದಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ನಿನ್ನೆ ಶನಿವಾರ ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಂಗಳೂರಿನಲ್ಲಿ ರಹಸ್ಯವಾಗಿ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಜೊತೆ ಮಾತುಕತೆ ನಡೆಸಿದ್ದಾರೆ. 15 ನಿಮಿಷಗಳ ಕಾಲ ನಡೆದ ಈ ಮಾತುಕತೆಯಲ್ಲಿ ಅಮಿತ್ ಶಾ ಅವರು ಕರ್ನಾಟಕ ಬಿಜೆಪಿ ಘಟಕದ ಆಂತರಿಕ ಭಿನ್ನರ ಬಂಡಾಯಕ್ಕೆ ತಿಲಾಂಜಲಿ ಇಡಲು ಯಡಿಯೂರಪ್ಪ ಮತ್ತವರ ಪುತ್ರ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಜೊತೆಗೆ ಗಹನವಾದ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಇದೀಗ ಬಂದ ಮಾಹಿತಿ ಪ್ರಕಾರ ಕರ್ನಾಟಕ ಬಿಜೆಪಿ ಭಿನ್ನರ ಬಣಕ್ಕೆ ದೆಹಲಿಗೆ ಬರುವಂತೆ ಅಮಿತ್ ಶಾ ಬುಲಾವ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯ ಬಿಜೆಪಿ ಭಿನ್ನರ ಬಣದಲ್ಲಿರುವ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರಿಗೆ ಇದೇ ಮಂಗಳವಾರ ದೆಹಲಿಗೆ ಬರುವಂತೆ ಅಮಿತ್ ಶಾ ಬುಲಾವ್ ನೀಡಿದ್ದಾರೆ ಎಂದು ಗೊತ್ತಾಗಿದೆ.
ಈ ಹಿನ್ನೆಲೆಯಲ್ಲಿ ಮೂಲ ಬಿಜೆಪಿಯ ಹಿರಿಯ ನಾಯಕರಾಗಿರುವ ಅರವಿಂದ ಲಿಂಬಾವಳಿ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಲು ಬಿಜೆಪಿ ಹೈಕಮಾಂಡ್ ಮುಂದಾದರೂ ಆಶ್ಚರ್ಯವಿಲ್ಲ ಎನ್ನುತ್ತಿವೆ ದೆಹಲಿ ಬಿಜೆಪಿ ಮೂಲಗಳು.
ಹೀಗಾಗಿ ಮಂಗಳವಾರ ಅರವಿಂದ ಲಿಂಬಾವಳಿ ಅವರ ದೆಹಲಿ ಭೇಟಿ ಕರ್ನಾಟಕ ಬಿಜೆಪಿ ಬಣ ಬಡಿದಾಟಕ್ಕೆ ಫುಲ್ ಸ್ಟಾಪ್ ಇಡುವ ನಿರೀಕ್ಷೆ ಹೆಚ್ಚಾಗಿದೆ.