ಬಿಯರ್ ಕುಡಿಯುವವರಿಗೆ ಬೀಳಲಿದೆ ಬೆಲೆ ಏರಿಕೆಯ ಬರೆ !

Share It

ಬೆಂಗಳೂರು: ಕರ್ನಾಟಕ ಸರ್ಕಾರವು ಎಲ್ಲಾ ಬಿಯರ್‌ಗಳ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಶೇ.10 ರಷ್ಟು ಹೆಚ್ಚಳ ಮಾಡಲು ನಿರ್ಧರಿಸಿದೆ. ಸದ್ಯ ಕರ್ನಾಟಕದಲ್ಲಿ ಬಿಯರ್ ಮೇಲಿನ ತೆರಿಗೆ ಉತ್ಪಾದನಾ ವೆಚ್ಚದ ಶೇ.195 ರಷ್ಟಿದೆ. ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.205 ಕ್ಕೆ ಹೆಚ್ಚಿಸುವ ಬಗ್ಗೆ ರಾಜ್ಯದ ಹೊಸ ಕರಡು ನಿಯಮದಲ್ಲಿ ಉಲ್ಲೇಖಿಸಲಾಗಿದೆ. ಪ್ರೀಮಿಯಂ ಅಥವಾ ಇತರ ಬಿಯರ್ ಬ್ರಾಂಡ್‌ಗಳ ಬೆಲೆಯು ಉತ್ಪಾದನಾ ವೆಚ್ಚವನ್ನು ಅವಲಂಬಿಸಿ ಪ್ರತಿ ಬಾಟಲ್​​ಗೆ ಸುಮಾರು 10 ರೂಪಾಯಿಗಳಷ್ಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಒಟ್ಟಾರೆಯಾಗಿ ತೆರಿಗೆ ಹೆಚ್ಚಳದ ನಂತರ ಬಿಯರ್ ದರ 10 ರೂ.ನಷ್ಟು ಹೆಚ್ಚಳವಾಗಬಹುದು. ಮಧ್ಯಮ ಶ್ರೇಣಿಯ ಮತ್ತು ಅಗ್ಗದ ಸ್ಥಳೀಯ ಬಿಯರ್‌ಗಳಿಗೆ ಪ್ರತಿ ಬಾಟಲಿಗೆ 5 ರೂ.ವರೆಗೆ ದರ ಏರಿಕೆಯಾಗುವ ಸಂಭವವಿದೆ. ಆದರೆ ಬಿಯರ್ ಬೆಲೆ ಏರಿಕೆಯು ಬ್ರ್ಯಾಂಡ್‌ನಿಂದ ಬ್ರ್ಯಾಂಡ್‌ಗೆ ವ್ಯತ್ಯಾಸವಾಗಿರಲಿದೆ.

ಹಿಂದೆ, ಕರ್ನಾಟಕದಲ್ಲಿ ಬಿಯರ್​​​ಗೆ 2 ಹಂತದ ತೆರಿಗೆ ವ್ಯವಸ್ಥೆ ಇತ್ತು. ಕೆಳ ಹಂತದ ಬ್ರಾಂಡ್‌ಗಳಿಗೆ ಲೀಟರ್‌ಗೆ 130 ರೂ. ವರೆಗೆ ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಇತರ ಬ್ರಾಂಡ್‌ಗಳಿಗೆ ಶೇಕಡಾವಾರು ತೆರಿಗೆ ವಿಧಿಸಲಾಗುತ್ತಿತ್ತು. ಈ ವ್ಯವಸ್ಥೆಯನ್ನು ಈಗ ರದ್ದುಗೊಳಿಸಲಾಗಿದ್ದು, ಎಲ್ಲಾ ಬಿಯರ್‌ಗಳಿಗೆ ಏಕರೂಪದ ಶೇ. 205 ರ ತೆರಿಗೆ ನಿಗದಿಪಡಿಸಲಾಗಿದೆ.

ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವ ಗುರಿಯೊಂದಿಗೆ ಈ ಕ್ರಮ ಕೈಗೊಳ್ಳಲಾಗಿದೆ. ಕಡಿಮೆ ತೆರಿಗೆ ಶ್ರೇಣಿಯನ್ನು ತೆಗೆದುಹಾಕುವುದರೊಂದಿಗೆ, ಎಲ್ಲಾ ಬಿಯರ್ ಬ್ರಾಂಡ್‌ಗಳಿಗೆ ಒಂದೇ ರೀತಿಯ ತೆರಿಗೆ ವಿಧಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

3ನೇ ಬಾರಿಗೆ ಬಿಯರ್ ದರ ಏರಿಕೆ!
ಈಗಿನ ಪ್ರಸ್ತಾವಿತ ಬಿಯರ್ ತೆರಿಗೆ ದರ ಹೆಚ್ಚಳದೊಂದಿಗೆ, 3 ವರ್ಷಗಳ ಅವಧಿಯಲ್ಲಿ ಬಿಯರ್ ಮೇಲಿನ ತೆರಿಗೆಯನ್ನು 3ನೇ ಬಾರಿ ಹೆಚ್ಚಳ ಮಾಡಿದಂತಾಗಲಿದೆ. 2023 ರ ಜುಲೈನಲ್ಲಿ ಕಾಂಗ್ರೆಸ್ ಸರ್ಕಾರವು ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.175 ರಿಂದ 185 ಕ್ಕೆ ಹೆಚ್ಚಿಸಿತ್ತು. 2025 ರ ಜನವರಿ 20 ರಂದು ಮತ್ತೊಂದು ಪರಿಷ್ಕರಣೆ ಮಾಡಲಾಗಿತ್ತು. ಆಗ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.195 ಕ್ಕೆ ಅಥವಾ ಪ್ರತಿ ಬಲ್ಕ್ ಲೀಟರ್‌ಗೆ 130 ರೂ.ವರೆಗೆ (ಯಾವುದು ಹೆಚ್ಚೋ ಅದಕ್ಕೆ ಅನುಗುಣವಾಗಿ) ಹೆಚ್ಚಳ ಮಾಡಿತ್ತು. ಇದೀಗ ಮತ್ತೆ ತೆರಿಗೆ ಹೆಚ್ಚಳ ಮಾಡಿದೆ.

ಮೂಲ ಅಬಕಾರಿ ಸುಂಕವನ್ನು ಸಹ ಪರಿಷ್ಕರಿಸಲಾಗಿದೆ. ಫ್ಲಾಟ್ ರೇಟ್ ಬದಲಿಗೆ, ಆಲ್ಕೋಹಾಲ್ ಅಂಶವನ್ನು ಆಧರಿಸಿದ ಶ್ರೇಣೀಕೃತ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಶೇ.5 ಅಥವಾ ಅದಕ್ಕಿಂತ ಕಡಿಮೆ ಆಲ್ಕೋಹಾಲ್ ಹೊಂದಿರುವ ಬಿಯರ್‌ಗೆ ಪ್ರತಿ ಬಲ್ಕ್ ಲೀಟರ್‌ಗೆ 12 ರೂ. ಮತ್ತು ಶೇ. 5 ರಿಂದ 8 ರ ಆಲ್ಕೋಹಾಲ್ ಹೊಂದಿರುವ ಬಿಯರ್‌ಗೆ 20 ರೂ. ನಿಗದಿಪಡಿಸಲಾಗಿದೆ.


Share It

You May Have Missed

You cannot copy content of this page