ನವದೆಹಲಿ: ಮಧ್ಯ ಪ್ರಾಚ್ಯ ಪ್ರದೇಶದಲ್ಲಿ ಇರಾನ್-ಇಸ್ರೇಲ್ ದೇಶಗಳ ಯುದ್ಧದಲ್ಲಿ ಇದೀಗ ಅಮೆರಿಕಾ ಸಹ ರಂಗಪ್ರವೇಶ ಮಾಡಿದೆ. ಈಗಾಗಲೇ ಅಮೆರಿಕಾದ ಯುದ್ಧ ವಿಮಾನಗಳು ಇರಾನ್ ದೇಶದ 3 ಪರಮಾಣು ಸ್ಥಾವರಗಳ ಮೇಲೆ ವೈಮಾನಿಕ ದಾಳಿ ನಡೆಸಿವೆ.
ಇದರಿಂದ ಕೆರಳಿರುವ ಇರಾನ್ ದೇಶ ಇಂದು ಇಸ್ರೇಲ್ ದೇಶದ ರಾಜಧಾನಿ ಟೆಲ್ ಅವೀವ್ ನಗರದ ಮೇಲೆ ಸತತವಾಗಿ ವೈಮಾನಿಕ ದಾಳಿ ನಡೆಸುತ್ತಿದೆ. ಈ ನಡುವೆ ಇರಾನ್ ದೇಶ ಇಸ್ರೇಲ್-ಅಮೆರಿಕಾ ದೇಶಗಳ ಜಂಟಿ ವೈಮಾನಿಕ ದಾಳಿಗೆ ತಿರುಗೇಟು ನೀಡಿ ಇಸ್ರೇಲ್ ರಾಜಧಾನಿ ಟೆಲ್ ಅವೀವ್ ನಗರದ ಮೇಲೆ ಭಾರಿ ಪ್ರಮಾಣದಲ್ಲಿ ಕ್ಷಿಪಣಿ ದಾಳಿ ನಡೆಸುತ್ತಿದೆ.
ಇದೇ ವೇಳೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲು ಇರಾನ್ ಸಂಸತ್ತು ಅನುಮೋದನೆ ನೀಡಿದೆ. ಹಾರ್ಮುಜ್ ಜಲಸಂಧಿಯ ಮೂಲಕ ಶೇಕಡಾ 40 ರಷ್ಟು ಕಚ್ಚಾ ತೈಲವನ್ನು ಸಾಗಿಸಲಾಗುತ್ತಿತ್ತು.
ಆದರೀಗ ಈ ಹಾರ್ಮುಜ್ ಜಲಸಂಧಿಯನ್ನೇ ಮುಚ್ಚಲು ಇರಾನ್ ಸಂಸತ್ತು ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಜಗತ್ತಿನಲ್ಲಿ ಕಚ್ಚಾ ತೈಲ ಅಭಾವ ಹೆಚ್ಚಾಗುವ ಕಾರಣ ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್, ಡೀಸಲ್, ಗ್ಯಾಸ್ ಬೆಲೆ ತೀರಾ ಹೆಚ್ಚಾಗಲಿದೆ ಎಂದು ವರದಿ ತಿಳಿಸಿದೆ.
ಇದರಿಂದ ಜಗತ್ತಿನ ಎಲ್ಲಾ ದೇಶಗಳಲ್ಲಿ ಕೆಲವೇ ತಾಸುಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳಿಗೆ ಹಾಹಾಕಾರ ಉಂಟಾಗಲಿದೆ ಎಂದು ಗಲ್ಫ್ ಮೂಲಗಳು ತಿಳಿಸಿವೆ.