ಬೆಂಗಳೂರು: ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಬಂದಿದ್ದ ಪರಿಶಿಷ್ಟ ಜಾತಿಯ ಜನರ ಮೇಲೆ ಹಲ್ಲೆ ನಡೆಸಿ ಜಾತಿನಿಂದನೆ ಮಾಡಿದ್ದ ಪ್ರಕರಣದಲ್ಲಿ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
2010 ರ ಜನವರಿ 21 ರಂದು ಮಂಡ್ಯ ಜಿಲ್ಲೆಯ ಕೆ.ಎಂ.ದೊಡ್ಡಿ ತಾಲೂಕಿನ ಎಸ್.ಐ ಹೊನಲಗೆರೆ ಗ್ರಾಮದಲ್ಲಿ ನಡೆದಿದ್ದ ದೌರ್ಜನ್ಯ ಪ್ರಕರಣದಲ್ಲಿ ಮಂಡ್ಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು. ಸೆಷನ್ಸ್ ಕೋರ್ಟ್ ತೀರ್ಪು ಎತ್ತಿಹಿಡಿದ ಹೈಕೋರ್ಟ್ ಆರೋಪಿಗಳಿಗೆ ವಿಧಿಸಿದ್ದ ಆರು ತಿಂಗಳ ಜೈಲು ಶಿಕ್ಷೆ ಹಾಗೂ ತಲಾ ಒಂಬತ್ತು ಸಾವಿರ ರು. ದಂಡವನ್ನು ಖಾಯಂಗೊಳಿಸಿತು.
ಗ್ರಾಮದ ಬೇವಿನಮ್ಮ ದೇವಸ್ಥಾನದ ಪ್ರತಿಷ್ಠಾಪನೆ ವೇಳೆ ದಲಿತರು ಆರತಿ ಬೆಳಗಲು ಮುಂದಾಗಿದ್ದರು. ಇದನ್ನು ಪಡೆದ ಒಕ್ಕಲಿಗ ಸಮುದಾಯದ ಒಂಬತ್ತು ಆರೋಪಿಗಳು, ಆರತಿಯನ್ನು ಚೆಲ್ಲಾಡಿದ್ದರು. ಜತೆಗೆ, ದಲಿತ ಕೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಾಕುವುದಾಗಿ ಬೆದರಿಕೆ ಹಾಕಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕೆ.ಎಂ. ದೊಡ್ಡಿ ಪೊಲೀಸರು, ಒಂಬತ್ತು ಆರೋಪಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ್ದ ನ್ಯಾಯಾಲಯ ಆರೋಪಿಗಳಾದ ಮದ್ದೂರು ಹೋಬಳಿಯ ಬಾಣಗದ ಹಳ್ಳಿಯ ಕೆಂಚೇಗೌಡ, ಮಹದೇವ, ನಾಗರಾಜು ಹಾಗೂ ಹೊನ್ನಲಗೆರೆ ಗ್ರಾಮದ ಆನಂದ್, ದೇವರಾಜು, ರವಿ, ಕೆಂಪೇಗೌಡ ರವಿಕುಮಾರ್ ಮತ್ತು ನಂದೀಶ್ ಎಂಬ ಆರೋಪಿಗಳಿಗೆ ಆರು ತಿಂಗಳ ಜೈಲು ಶಿಕ್ಷೆ ಹಾಗೂ ತಲಾ ಒಂಬತ್ತು ಸಾವಿರ ದಂಡ ವಿಧಿಸಿತ್ತು.
ಸೆಷನ್ ಕೋರ್ಟ್ ತೀರ್ಪು ಪ್ರಶ್ನಿಸಿ ಈ ಎಲ್ಲ ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಪ್ರಕರಣದಲ್ಲಿ ಆರೋಪಿಗಳಿಗೆ ವಿಧಿಸಿರುವ ಶಿಕ್ಷೆಯನ್ನು ಖಾಯಂಗೊಳಿಸಿ, ಸೆಷನ್ ಕೋರ್ಟ್ ತೀರ್ಪನ್ನು ಎತ್ತಿಹಿಡಿದಿದೆ.