ಕಾರವಾರ: ಅಂಗನವಾಡಿ ಮುಗಿಸಿ ಮನೆಗೆ ತೆರಳುತ್ತಿದ್ದ ಮಕ್ಕಳು ಹಾಗೂ ಮಕ್ಕಳನ್ನು ಕರೆತರಲು ತೆರಳಿದ್ದ ಗರ್ಭಿಣಿ ಮೇಲೆ ಬೃಹತ್ ಗಾತ್ರದ ಮರ ಬಿದ್ದ ಸಾವನ್ನಪ್ಪಿದ್ದಾರೆ. ಮರ ಬಿದ್ದ ರಭಸಕ್ಕೆ ಮಕ್ಕಳು ತೀವ್ರವಾಗಿ ಗಾಯಗೊಂಡಿರುವ ಘಟನೆ ಯಲ್ಲಾಪುರ ತಾಲೂಕಿನ ಕಿರವತ್ತಿಯ ಡೊಮಗೇರಿಯಲ್ಲಿ ಸೋಮವಾರ ನಡೆದಿದೆ.
ಮಕ್ಕಳನ್ನು ಮನೆಗೆ ಕರೆತರಲು ಹೋಗಿದ್ದ 5 ತಿಂಗಳ ಗರ್ಭಿಣಿ ಸಾವಿತ್ರಿ ಬಾಬು ಖರಾತ್(24) ಸಾವನ್ನಪ್ಪಿದ್ದಾರೆ. ಇನ್ನು ಮರಬಿದ್ದ ಪರಿಣಾಮ ಸ್ವಾತಿ ಬಾಬು ಖರಾತ್ (17), ಘಾಟು ಲಕ್ಕು ಕೊಕರೆ (5), ಶ್ರಾವಣಿ ಬಾಬು ಖರಾತ್ (2), ಶಾಂಭವಿ ಬಾಬು ಖರಾತ್ (4) ತೀವ್ರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕೆತ್ಸೆಗಾಗಿ ಹುಬ್ಬಳ್ಳಿಗೆ ರವಾನಿಸಲಾಗಿದೆ. ಇನ್ನುಳಿದಂತೆ ಸಾನ್ವಿ ಬಾಬು ಕೊಕರೆ (5), ವಿನಯ್ ಲಕ್ಕು ಖರಾತ್ (5), ಅನುಶ್ರೀ ಮಾಂಬು ಕೊಕರೆ (5) ಘಟನೆಯಲ್ಲಿ ಅದೃಷ್ಟವಶಾತ್ ಪಾರಾಗಿದ್ದಾರೆ.
ಸಿಪಿಐ ರಮೇಶ ಹನಾಪೂರ, ಪೊಲೀಸ್ ಸಿಬ್ಬಂದಿ ಮತ್ತು ಹೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯ ನಡೆಸಿದರು. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಸಕ ಶಿವರಾಮ ಹೆಬ್ಬಾರ್ ಅವರು ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ದುಃಖಿತರಾದ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು.
ಮಕ್ಕಳ ಆರೋಗ್ಯದ ಬಗ್ಗೆ ಅಧಿಕಾರಿಗಳ ಬಳಿ ವಿಚಾರಿಸಿ ಅಗತ್ಯ ಚಿಕಿತ್ಸೆ ನೀಡಲು ಸೂಚಿಸಿದರು. ಮೃತರ ಕುಟುಂಬಕ್ಕೆ ಸರ್ಕಾರದಿಂದ ಅಗತ್ಯ ಪರಿಹಾರ ಒದಗಿಸುವ ಭರವಸೆ ನೀಡಿದರು.