ಅಪರಾಧ ಸುದ್ದಿ

ಧರ್ಮದ ಹೆಸರು ಬಳಸಿ ಸರಕಾರದ ಜಾಗದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಸಾಧ್ಯವಿಲ್ಲ ಎಂದ ಹೈಕೋರ್ಟ್

Share It

ಧರ್ಮದ ಹೆಸರು ಬಳಸಿ ಸರಕಾರದ ಜಾಗದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಸಾಧ್ಯವಿಲ್ಲ ಎಂದ ಹೈಕೋರ್ಟ್

ಬೆಂಗಳೂರು: ಧರ್ಮದ ಹೆಸರಲ್ಲಿ ಸರ್ಕಾರಿ ಜಾಗ ಅತಿಕ್ರಮಿಸಿ, ಅನಂತರ ಅಲ್ಲಿ ದೇವರ ಹೆಸರಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವುದಕ್ಕೆ ಅವಕಾಶ ನೀಡಲಾಗದು ಎಂದು ಹೈಕೋರ್ಟ್ ತಿಳಿಸಿದೆ.

ಕೋಲಾರ ತಾಲೂಕಿನ ವೇಮಗಲ್ ಹೋಬಳಿಯ ಕ್ಯಾಲನೂರು ಗ್ರಾಮದ ಸರ್ಕಾರಿ ಶಾಲೆಯ ಕಾಂಪೌಂಡ್ ಹಾಗೂ ಗ್ರಾಮದ ರಸ್ತೆ ಸರ್ಕಾರಿ ಜಾಗದಲ್ಲಿ ಕಟ್ಟಲಾಗಿರುವ ಮಳಿಗೆಗಳ ತೆರವಿಗೆ ಕೋಲಾರ ತಹಶೀಲ್ದಾರ್ ಜಾರಿಗೊಳಿಸಿರುವ ನೊಟೀಸ್ ಪ್ರಶ್ನಿಸಿ, ಗ್ರಾಮದ ವಿರಾಟ್ ಹಿಂದೂ ಸೇವಾ ಚಾರಿಟಬಲ್ ಟ್ರಸ್ಟ್ (ರಿ) ಹಾಗೂ ಜಾಮೀಯಾ ಮಸೀದಿ ಕಮಿಟಿ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರನ್ನು ಉದ್ದೇಶಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅರ್ಜಿದಾರರು ಮಳಿಗೆಗಳನ್ನು ಕಟ್ಟಿರುವ ಜಾಗ ಸರ್ಕಾರಿ ಜಮೀನು ಎಂದು ಗೊತ್ತಾದಾಗ, ಸರ್ಕಾರಿ ಜಾಗದಲ್ಲಿ ಧಾರ್ಮಿಕ ಸಂಸ್ಥೆಗಳ ಕೆಲಸ ಏನಿದೆ?, ಮಳಿಗೆಗಳನ್ನು ಕಟ್ಟಿ ಅವುಗಳನ್ನು ಬಾಡಿಗೆಗೆ ಕೊಟ್ಟು ಬಾಡಿಗೆ ವಸೂಲಿ ಮಾಡುತ್ತಿರುವುದು ಯಾವ ಆಧಾರದಲ್ಲಿ ಮತ್ತು ಯಾವ ಉದ್ದೇಶಕ್ಕೆ? ಎಂದು ಪ್ರಶ್ನಿಸಿತು.

ಇದು ದೇವರ ಹೆಸರಲ್ಲಿ ರಿಯಲ್ ಎಸ್ಟೇಟ್ ಅಲ್ಲದೆ ಮತ್ತೇನಿಲ್ಲ. ಈ ರೀತಿ ಧರ್ಮದ ಹೆಸರಲ್ಲಿ ಸರ್ಕಾರಿ ಜಾಗ ಅತಿಕ್ರಮಣ ಮತ್ತು ದೇವರ ಹೆಸರಲ್ಲಿ ರಿಯಲ್ ಎಸ್ಟೇಟ್​ಗೆ ಅವಕಾಶ ನೀಡಲಾಗದು. ಅರ್ಜಿದಾರರು ಚಾರಿಟಬಲ್ ಟ್ರಸ್ಟ್ ಎಂದು ಹೇಳಿಕೊಂಡಿದ್ದು ಮಳಿಗೆ ಕಟ್ಟಿ ಬಾಡಿಗೆ ವಸೂಲಿ ಮಾಡುವುದು ಏಕೆ? ಎರಡೂ ಧರ್ಮದವರು ಅರ್ಜಿ ಸಲ್ಲಿಸಿದ್ದಾರೆ. ‘ರಾಮ್-ರಹೀಮ್‘ ಸೇರಿ ಬಂದಿರುವುದೇ ಅನುಮಾನ ಹುಟ್ಟುಹಾಕುತ್ತಿದೆ ಎಂದು ತಿಳಿಸಿತು.

ಜಾಗ ಮಂಜೂರು ಪ್ರಸ್ತಾವನೆ ಜಿಲ್ಲಾಧಿಕಾರಿಗಳ ಮುಂದಿದ್ದರೆ ಅವರ ಬಳಿ ಹೋಗಿ, ಜಾಗ ಮಂಜೂರು ಮಾಡುವುದು ಅವರಿಗೆ ಬಿಟ್ಟಿದ್ದು. ಸದ್ಯಕ್ಕಂತೂ ಜಾಗ ಸರ್ಕಾರಕ್ಕೆ ಸೇರಿದ್ದು. ಸರ್ಕಾರಿ ಜಾಗದಲ್ಲಿ ನೀವು ಹಕ್ಕು ಸಾಧಿಸಲು ಬರುವುದಿಲ್ಲ. ಸರ್ಕಾರಿ ಜಾಗ ಇದ್ದಾಗ ನಿಮಗೆ ಯಾವುದೇ ರಕ್ಷಣೆ ಅಥವಾ ಪರಿಹಾರ ನೀಡಲಾಗದು ಎಂದು ನ್ಯಾಯಪೀಠ ಹೇಳಿತು.

ಅಲ್ಲದೇ ಸರ್ಕಾರಿ ಜಾಗ ಖಾಸಗಿಯವರು ಬಳಕೆ ಮಾಡುತ್ತಿದ್ದರೂ ಈವರೆಗೆ ಸುಮ್ಮನೆ ಇದ್ದದ್ದು ಯಾಕೆ ಎಂದು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತು. ಅರ್ಜಿದಾರರ ಪ್ರಮಾಣಿಕತೆ ಕುರಿತು ಮಾಹಿತಿ ನೀಡುವಂತೆ ನಿರ್ದೇಶಿಸಿತು. ಅರ್ಜಿ ಸಂಬಂಧ ಸರ್ಕಾರ, ಕೋಲಾರ ಜಿಲ್ಲಾಧಿಕಾರಿ, ವಿಭಾಗಾಧಿಕಾರಿ, ತಹಶೀಲ್ದಾರರಿಗೆ ನೊಟೀಸ್ ಜಾರಿಗೊಳಿಸಿದ ನ್ಯಾಯಪೀಠ ವಿಚಾರಣೆಯನ್ನು ನ. 21 (ಶುಕ್ರವಾರಕ್ಕೆ) ಮುಂದೂಡಿತು.

ಇದಕ್ಕೂ ಮುನ್ನ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕ್ಯಾಲನೂರು ಗ್ರಾಮದ ಖಾಲಿ ಜಾಗವನ್ನು ದಶಕದಿಂದ ಎರಡೂ ಅರ್ಜಿದಾರ ಸಂಸ್ಥೆಗಳು ನಿರ್ವಹಣೆ ಮಾಡಿಕೊಂಡು ಬಂದಿವೆ. ಗ್ರಾಮಸ್ಥರ ಹಿತದೃಷ್ಟಿಯಿಂದ ಈ ಜಾಗದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗಿದೆ. ಸಮುದಾಯದ ದೇಣಿಗೆಗಳಿಂದ ಮಳಿಗೆಗಳನ್ನು ನಿರ್ಮಿಸಿ, ಮೂಲಸೌಕರ್ಯ ಸೃಷ್ಟಿಸಲಾಗಿದೆ ಎಂದು ಹೇಳಿದ್ದರು.

ಇದರಿಂದ ಬರುವ ಬಾಡಿಗೆ ಹಣವನ್ನು ಧಾರ್ಮಿಕ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತದೆ. ಈ ಸ್ಥಳ ಅರ್ಜಿದಾರರ ಸಂಸ್ಥೆಗಳಿಗೆ ಮಂಜೂರು ಮಾಡಬೇಕು ಎಂದು 2015ರಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯ ಆಗಿದೆ. ಆ ಪ್ರಸ್ತಾವನೆ ಸದ್ಯ ಜಿಲ್ಲಾಧಿಕಾರಿ ಬಳಿ ಬಾಕಿ ಇದೆ. ಈ ನಡುವೆ, ಮಳಿಗೆಗಳನ್ನು ತೆರವುಗೊಳಿಸಲು ತಹಶೀಲ್ದಾರ್ ನೊಟೀಸ್ ಜಾರಿಗೊಳಿಸಿದ್ದು, ನ.21 ತೆರವು ಕಾರ್ಯಾಚರಣೆ ನಿಗದಿಯಾಗಿದೆ ಎಂದು ವಿವರಿಸಿದರು.


Share It

You cannot copy content of this page