ಬೆಂಗಳೂರು: ರಜನೀಕಾಂತ್ ಭಾರತ ಸಿನಿಮಾರಂಗದ ಸೂಪರ್ ಸ್ಟಾರ್. ಏಷ್ಯಾದ ಅತ್ಯಂತ ಪ್ರಭಾವಿ ನಟ ಎಂಬ ಬಿರುದು ಪಡೆದವರು. ಆದರೆ, ಅವರ ಬಾಲ್ಯ ಮತ್ತು ಆರಂಭದ ವೃತ್ತಿ ಜೀವನ ಕಳೆದಿದ್ದು ಬೆಂಗಳೂರಿನಲ್ಲಿ.
ಇದೀಗ ಸ್ವತಃ ರಜನೀಕಾಂತ್ ತಮ್ಮ ಬಾಲ್ಯ ಹಾಗೂ ಶಾಲಾ ದಿನಗಳಲ್ಲಿನ ಅನುಭವವನ್ನು ಹಂಚಿಕೊಂಡಿದ್ದಾರೆ. ತಾವು ಓದಿದ ಕನ್ನಡ ಮಾಧ್ಯಮ ಶಾಲೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ವಿಡಿಯೋ ಮಾಡಿದ್ದು, ಇದೀಗ ಆ ವಿಡಿಯೋ ವೈರಲ್ ಆಗಿದೆ.
ಎನ್ ಪಿಎಸ್ ಶಾಲೆಯ ವಾರ್ಷಿಕೋತ್ಸವದಲ್ಲಿ ನಾನಿ ಭಾಗವಹಿಸಬೇಕಾಗಿತ್ತು. ಸಿಂಗಾಪುರ್ ನಲ್ಲಿ ಶೂಟಿಂಗ್ ನಲ್ಲಿರುವ ಕಾರಣ ಬರಲು ಸಾಧ್ಯವಾಗುತ್ತಿಲ್ಲ. ನಾನು ಏಳನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ್ದೆ. ಆಗ ನಾನು ಕ್ಲಾಸಿಗೆ ಫಸ್ಟ್ ಬರುತ್ತಿದ್ದೆ. ಕ್ಲಾಸ್ ಲೀಡರ್ ಆಗಿದ್ದೆ ಎಂದು ಅನುಭವ ಹಂಚಿಕೊಂಡಿದ್ದಾರೆ.
ಜತೆಗೆ ಕನ್ನಡ ಮಾಧ್ಯಮದಿಂದ ತಾವು ಇಂಗ್ಲೀಷ್ ಮಾಧ್ಯಮಕ್ಕೆ ಸೇರಿ, ಅಲ್ಲಿ ಫೇಲ್ ಆಗಿದ್ದ ಬಗ್ಗೆ ಹೇಳಿಕೊಂಡಿದ್ದಾರೆ. ಫೇಲ್ ಆದ ಕಾರಣಕ್ಕೆ ಅವರು, ಮಾನಸಿಕ ಖಿನ್ನತೆಗೆ ಒಳಗಾದ ಬಗ್ಗೆಯೂ ರಜನೀಕಾಂತ್ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಸೂಪರ್ ಸ್ಟಾರ್ ಮಾಡಿರುವ ವಿಡಿಯೋ, ಹಾಗೂ ಬೆಂಗಳೂರು ಮತ್ತು ಕರ್ನಾಟಕದ ಒಡನಾಟ ಇದೀಗ ನೆಟ್ಟಿಗರ ಮನಗೆದ್ದಿದೆ.