ಬೆಂಗಳೂರು: ಮಹಾರಾಷ್ಟ್ರ ಚುನಾವಣೆ ಮುಗಿದಿದ್ದು, ಬಹುತೇಕ ಮತದಾನೋತ್ತರ ಸಮೀಕ್ಷೆಗಳು ಅತಂತ್ರ ಪರಿಸ್ಥಿತಿಯ ಚಿತ್ರಣ ನಿರ್ಮಾಣವಾಗುವುದನ್ನೇ ಸೂಚಿಸಿವೆ.
ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಲ್ಲಿ ಅಧಿಕಾರ ಪಡೆಯಲು 145 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಿದೆ. ಈ ನಡುವೆ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತು ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ ಮ್ಯಾಜಿಕ್ ನಂಬರ್ ಸುತ್ತಮುತ್ತಲೇ ಸುಳಿದಾಡುತ್ತವೆ ಎಂದು ಸಮೀಕ್ಷೆ ಹೇಳಿದೆ.
ಬಹುತೇಕ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೋಟಕ್ಕೆ ಸರಳ ಬಹುಮತ ಸಿಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರೂ, ದೊಡ್ಡ ಸಂಖ್ಯೆಯ ಗೆಲುವಿನ ಬಗ್ಗೆ ಧೈರ್ಯವಾಗಿ ಮಾತನಾಡಿಲ್ಲ. ಹೀಗಾಗಿ, 145 ರಿಂದ 150 ರ ಆಸುಪಾಸಿನಲ್ಲಿಯೇ ಸಂಖ್ಯೆಗಳನ್ನು ನೀಡಿದೆ. ಇದು ಮತ್ತೊಂದು ಅತಂತ್ರ ವಿಧಾನಸಭೆಯ ಮುನ್ಸೂಚನೆ ಎನ್ನಬಹುದು.
ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿಗೆ ಆರು ಸಮೀಕ್ಷೆಗಳ ಪೈಕಿ ಎರಡರಲ್ಲಿ ಸರಳ ಬಹುಮತದ ಸೂಚನೆ ಸಿಕ್ಕಿದೆ. ಇನ್ನೆರೆಡು ಸಮೀಕ್ಷೆಗಳು ಸರಳ ಬಹುಮತದ ಸನಿಹ ಬರುವ ಮುನ್ಸೂಚನೆ ನೀಡಿವೆ. ಇನ್ನುಳಿದ ಎರಡು ಸಮೀಕ್ಷೆಗಳಲ್ಲಿ ಮಹಾಯುತಿಯ ಮೇಲುಗೈ ಬಗ್ಗೆ ಉಲ್ಲೇಖ ಮಾಡಲಾಗಿದೆ.
ಕಳೆದ ಚುನಾವಣೆಯಲ್ಲಿ ಇದೇ ರೀತಿಯ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿ, ಕಾಂಗ್ರೆಸ್ ನೇತೃತ್ವದ ಶಿವಸೇನೆ, ಎನ್ ಸಿಪಿ ಸಮ್ಮಿಶ್ರ ಸರಕಾರ ರಚನೆಯಾಗಿತ್ತು. ಕೆಲ ದಿನಗಳ ನಂತರ ಸರಕಾರ ಪತನಗೊಳಿಸಿದ ಬಿಜೆಪಿ, ಶಿವಸೇನೆಯನ್ನು ಇಬ್ಭಾಗ ಮಾಡಿ, ಸರಕಾರ ರಚನೆ ಮಾಡಿತ್ತು.
ಈ ಎಲ್ಲ ರಾಜಕೀಯ ಬೆಳವಣಿಗೆಗಳ ನಡುವೆಯೂ ಮಹಾರಾಷ್ಟ್ರದ ಲ್ಲಿ ಯಾವುದೇ ಒಂದು ಪಕ್ಷಕ್ಕೆ ಅಥವಾ ಒಂದು ಮೈತ್ರಿಕೂಟಕ್ಕೆ ಸರಳ ಬಹುಮತ ಸಿಗುವುದು ಅನುಮಾನ ಎಂದು ಸಮೀಕ್ಷೆಗಳು ಹೇಳುತ್ತಿವೆ. ಇದು ಮುಂದೆ ರಾಜಕೀಯ ಮಹಾ ನಾಟಕಕ್ಕೆ ದಾರಿ ಮಾಡಿಕೊಡುವ ಮುನ್ಸೂಚನೆ ನೀಡಿದೆ. ಆದರೆ, ಸಮೀಕ್ಷೆಗಳು ಎಷ್ಡು ನಿಖರವಾಗುತ್ತವೆ ಎಂಬುದನ್ನು ಫಲಿತಾಂಶ ಬರುವರೆಗೆ ಕಾದು ನೋಡಬೇಕಿದೆ.

