ಬೆಂಗಳೂರು: ಮೊಟ್ಟೆ ಎಸೆಯುವುದು ಮಾತ್ರವಲ್ಲ, ಆ್ಯಸಿಡ್ ದಾಳಿ ನಡೆಸಿ ನನ್ನನ್ನು ಕೊಲೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ರಾಜರಾಜೇಶ್ವರಿ ನಗರ ಶಾಸಕ ಎಸ್. ಮುನಿರತ್ನ ಆರೋಪ ಮಾಡಿದ್ದಾರೆ.
ತಮ್ಮ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟರ್ ಮೂಲಕ ಆತಂಕ ಹಂಚಿಕೊಂಡಿರುವ ಅವರು, ನನ್ನ ಮೇಲೆ ಆ್ಯಸಿಡ್ ದಾಳಿ ನಡೆಸಿ ಕೊಲೆ ಮಾಡುವ ಪ್ರಯತ್ನ ನಡೆದಿದೆ. ನನ್ನ ಮೇಲೆ ಎಸೆದ ಮೊಟ್ಟೆಯಲ್ಲಿ ಆ್ಯಸಿಡ್ ಮಾದರಿಯ ದ್ರವ್ಯವನ್ನು ಬಳಸಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದರಿಂದ ನನ್ನ ಮೇಲೆ ನಡೆದಿರುವ ಕೊಲೆ ಸಂಚು ಬಯಲಾಗಿದೆ ಎಂದು ತಿಳಿಸಿದ್ದಾರೆ.
ಡಿಸಿಎಂ ಡಿ.ಕೆ. ಶಿವಕುಮಾರ್, ಮಾಜಿ ಸಂಸದ ಡಿ.ಕೆ.ಸುರೇಶ್ ಹಾಗೂ ಹನುಮಂತರಾಯಪ್ಪ ನನ್ನನ್ನು ಮುಗಿಸುವ ಪ್ರಯತ್ನ ನಡೆಸಿದ್ದಾರೆ. ಇದಕ್ಕಾಗಿ, ನನ್ನ ಮೇಲೆ ದಾಳಿಯಂತಹ ಪ್ರಕರಣಗಳು ನಡೆಯುತ್ತಿವೆ. ಇದು ನನ್ನ ಕೊಲೆಗೆ ನಡೆದಿರುವ ಸಂಚು ಎಂದು ಮುನಿರತ್ನ ಆರೋಪಿಸಿದ್ದಾರೆ.