ಬೆಂಗಳೂರು: ಪಕ್ಷದ ಆಂತರಿಕ ವಿಚಾರದಲ್ಲಿ ಬಹಿರಂಗ ಟೀಕೆ ಮಾಡುವ ರಮೇಶ್ ಜಾರಕಿಹೊಳಿ ನಡೆದೆ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೀಡಿದ್ದ ಎಚ್ಚರಿಕೆಗೆ ರಮೇಶ್ ಜಾರಕಿಹೊಳಿ ಕೆಂಡಾಮಂಡಲರಾಗಿದ್ದಾರೆ.
ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ವಿಜಯೇಂದ್ರ ನೀನಿನ್ನೂ ಬಚ್ಚಾ, ನಿನಗೆ ರಾಜ್ಯಾಧ್ಯಕ್ಷನಾಗೋ ಯಾವ ಯೋಗ್ಯತೆಯೂ ಇಲ್ಲ. ಆದರೂ, ನಿನಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಲಾಗಿದೆ. ಇದರಿಂದಲೇ ಇಂದು ರಾಜ್ಯದಲ್ಲಿ ಪಕ್ಷಕ್ಕೆ ಇಂತಹ ಸ್ಥಿತಿ ಬಂದಿದೆ ಎಂದು ರಮೇಶ್ ಗುಡುಗಿದ್ದಾರೆ.
ಮುಂದುವರಿದು, ಯಡಿಯೂರಪ್ಪ ಅವರ ಬಗ್ಗೆ ನಮಗೆ ಗೌರವವಿದೆ. ಅವರನ್ನು ನಾನು ಇಂದಿಗೂ ನಮ್ಮ ನಾಯಕರು ಎಂದು ಒಪ್ಪಿಕೊಳ್ಳುತ್ತೇನೆ. ಅವರ ಬಗ್ಗೆ ನಾನು ಎಂದಿಗೂ ಕೆಟ್ಟದಾಗಿ ಮಾತನಾಡಿಲ್ಲ. ಆದರೆ, ನೀನು ಯಡಿಯೂರಪ್ಪ ಅವರ ಬಗ್ಗೆ ಲಘುವಾಗಿ ಮಾತನಾಡಬೇಡಿ ಎಂದು ಎಚ್ಚರಿಕೆ ಕೊಟ್ಟಿದ್ದೀಯಾ, ಇದೆಲ್ಲ ನಾಟಕ ಬೇಡ ಎಂದು ಎಚ್ಚರಿಕೆ ನೀಡಿದ್ದಾರೆ.
ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್ ಜತೆಗೆ ಗುರಿತಿಸಿಕೊಂಡಿದ್ದು, ವಿಜಯೇಂದ್ರ ಬದಲಾವಣೆಗೆ ಪ್ರಯತ್ನ ಮಾಡಿದ್ದರು. ಜತೆಗೆ, ವಿಜಯೇಂದ್ರ ವಿರುದ್ಧ ಕೆಲ ಹೇಳಿಕೆ ನೀಡಿದ್ದರು. ಇದರಿಂದ ಕೆರಳಿದ್ದ ವಿಜಯೇಂದ್ರ, ‘ ರಮೇಶ್ ಜಾರಕಿಹೊಳಿ ಅವರು ಇತ್ತೀಚೆಗೆ ಪಕ್ಷಕ್ಕೆ ಬಂದವರು, ಆದರೆ, ಯಡಿಯೂರಪ್ಪ ಬಿಜೆಪಿ ಕಟ್ಟಲು ಎಷ್ಟು ಕಷ್ಟ ಪಟ್ಟಿದ್ದಾರೆ ಎಂಬುದು ಗೊತ್ತಿದೆಯಾ ಎಂದು ಪ್ರಶ್ನೆ ಮಾಡಿದ್ದರು.
ಜತೆಗೆ, ಇನ್ನು ಮುಂದೆ ಪಕ್ಷದ ಬಗ್ಗೆ ಬಹಿರಂಗ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಿದ್ದರು. ವಿಜಯೇಂದ್ರ ಎಚ್ಚರಿಕೆಗೆ ಬಗ್ಗದ ರಮೇಶ್ ಜಾರಕಿಹೊಳಿ, ವಿಜಯೇಂದ್ರ ಕುರಿತು ಏಕವಚನದಲ್ಲಿಯೇ ಮಾತನಾಡಿದ್ದಾರೆ. ನೀನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಇರಲು ಯೋಗ್ಯನಲ್ಲ ಎಂದು ಕಿಡಿಕಾರಿದ್ದಾರೆ. ಈ ಹೇಳಿಕೆಗಳು ಬಿಜೆಪಿಯ ಭಿನ್ನಮತವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ.