ರಾಜಕೀಯ ಸುದ್ದಿ

ಮಹಾಕುಂಭ ಮೇಳದಲ್ಲಿ ಬೆಳಗಾವಿಯ ನಾಲ್ವರ ಸಾವು: ದೆಹಲಿಯಲ್ಲೇ ಮರಣೋತ್ತರ ಪರೀಕ್ಷೆ

Share It

ಬೆಳಗಾವಿ: ಪ್ರಯಾಗ್‌ರಾಜ್ ಮಹಾಕುಂಭ ಮೇಳದಲ್ಲಿ ಮೃತಪಟ್ಟ ಬೆಳಗಾವಿಯ ನಾಲ್ವರ ಮೃತದೇಹ ಇಂದು ಸಂಜೆ ಸುಮಾರಿಗೆ ಬೆಳಗಾವಿಗೆ ಬರಲಿದೆ.

ಮರಣೋತ್ತರ ಪರೀಕ್ಷೆಯನ್ನು ದೆಹಲಿಯಲ್ಲೇ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಮರಣೋತ್ತರ ಪರೀಕ್ಷೆ ನಡೆಸದೇ ಏರ್ ಲಿಫ್ಟ್ ಮಾಡುವಂತಿಲ್ಲ ಎಂಬ ನಿಯಮದ ಕಾರಣಕ್ಕೆ ಈ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.

ಆಂಬುಲೆನ್ಸ್‌ ಮೂಲಕ ಶವಗಳನ್ನು ದೆಹಲಿಗೆ ತರಲಾಗಿದೆ. ಅಲ್ಲಿಂದ ವಿಮಾನದ ಮೂಲಕ ಬೆಳಗಾವಿಗೆ ತರಲು ನಿರ್ಧರಿಸಲಾಗಿದೆ. ಉತ್ತರ ಪ್ರದೇಶ ಸರ್ಕಾರ ಮರಣೋತ್ತರ ಪರೀಕ್ಷೆ ನಡೆಸದೇ ಶವಗಳನ್ನು ಹಾಗೇ ಕಳುಹಿಸಿಕೊಟ್ಟಿದೆ. ಅನಿವಾರ್ಯವಾಗಿ ದೆಹಲಿಯಲ್ಲಿ ಮರಣೋತ್ತರ ಪರೀಕ್ಷೆ ಮಾಡಬೇಕಾಗಿದೆ. ಇದಕ್ಕಾಗಿ ದೆಹಲಿಯ ಕರ್ನಾಟಕ ಭವನದ ಪಕ್ಕದಲ್ಲಿರುವ ಆಸ್ಪತ್ರೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕರ್ನಾಟಕ ಭವನದ ಕಮೀಷನರ್‌ ಅವರನ್ನು ಸಂಪರ್ಕಿಸಿದ ಬೆಳಗಾವಿ ಜಿಲ್ಲಾಡಳಿತ ಮರಣೋತ್ತರ ಪರೀಕ್ಷೆಗೆ ಸಹಕಾರ ಪಡೆದಿದೆ. ಬಳಿಕ ಮೃತದೇಹಗಳು ವಿಮಾನ ನಿಲ್ದಾಣಕ್ಕೆ ಸ್ಥಳಾಂತರ ಆಗಲಿವೆ. ಮಧ್ಯಾಹ್ನ 3ಕ್ಕೆ ದೆಹಲಿಯಿಂದ ಬೆಳಗಾವಿಗೆ ಏರ್‌ಲಿಫ್ಟ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.


Share It

You cannot copy content of this page