ಫೋಕ್ಸೋ ಪ್ರಕರಣ: ಮಾಜಿ ಸಿಎಂ ಯಡಿಯೂರಪ್ಪಗೆ ನಿರೀಕ್ಷಣಾ ಜಾಮೀನು
ಬೆಂಗಳೂರು: ಫೋಕ್ಸೋ ಪ್ರಕರಣದ ಆರೋಪದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ನ್ಯಾಯಾಲಯ ರಿಲೀಫ್ ನೀಡಿದ್ದು, ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಧಾರವಾಡದ ಹೈಕೋರ್ಟ್ ಪೀಠದಲ್ಲಿ ನ್ಯಾ. ನಾಗಪ್ರಸನ್ನ ಅವರು ಇಂದು ಮಹತ್ವದ ತೀರ್ಪು ನೀಡಿದರು. ಯಡಿಯೂರಪ್ಪ ಅವರ ಮೇಲಿನ ತನಿಖೆ ಮತ್ತು ಆರೋಪಪಟ್ಟಿಗೆ ತಡೆ ನೀಡಬೇಕು ಎಂಬ ವಾದವನ್ನು ಅವರು ತಳ್ಳಿ ಹಾಕಿದ್ದು, ತನಿಖೆ ಮುಂದುವರಿಯಲಿದೆ ಎಂದು ತಿಳಿಸಿದರು.
ಬಿ.ಎಸ್. ಯಡಿಯೂರಪ್ಪ ಬಾಲಕಿ ಮೇಲೆ ಲೈಂಗಿಕ ಕಿರುಕುಳ ಮಾಡಿದ್ದಾರೆ ಎಂಬ ಆರೋಪದಲ್ಲಿ ದೂರು ದಾಖಲಾಗಿತ್ತು. ಅನಂತರ ದೂರು ನೀಡಿದ್ದ ಸಂತ್ರಸ್ತೆಯ ತಾಯಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಇದೀಗ ಯಡಿಯೂರಪ್ಪ ಬಂಧನಕ್ಕೆ ಎಸ್ಐಟಿ ಅನೇಕ ಬಾರಿ ಮನವಿ ಮಾಡಿತ್ತು. ಎಸ್ಐಟಿ ಸಲ್ಲಿಸಿರುವ ಆರೋಪ ಪಟ್ಟಿ ರದ್ದು ಮಾಡುವಂತೆ ಯಡಿಯೂರಪ್ಪ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ನ್ಯಾಯಪೀಠ ಆರೋಪಪಟ್ಟಿ ರದ್ದು ಮಾಡಲು ನಿರಾಕರಿಸಿ, ತನಿಖೆ ಮುಂದುವರಿಯುವುದಾಗಿ ತಿಳಿಸಿದೆ. ಆದರೆ, ನಿರೀಕ್ಷಣಾ ಜಾಮೀನು ನೀಡುವ ಮೂಲಕ ತನಿಖೆಗೆ ಸಹಕಾರ ನೀಡುವಂತೆ ಸೂಚಿಸಿದೆ.


