ಬೆಂಗಳೂರು: ‘ಅಕ್ಸಿಡೆಂಟಲ್ ಎಮ್ಮೆಲ್ಲೆ ಪ್ರದೀಪ್ ಈಶ್ವರ್ ಅವ್ರೆ, ಇದು ಯಾರಪ್ಪನ ಸರಕಾರವೂ ಅಲ್ಲ, ಇದು ಜನರ ಸರಕಾರ, ಎಲ್ಲವನ್ನೂ ಪ್ತಶ್ನಿಸುವ ಹಕ್ಕು ಜನರಿಗಿದೆ’ ಎಂದು ಬಿಜೆಪಿ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಹರಿಹಾಯ್ದಿದೆ.
ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ‘ಇದು, ನಿಮ್ಮಪ್ಪನ ಸರಕಾರವಲ್ಲ, ಸಿದ್ದರಾಮಯ್ಯ ಸರಕಾರ, ಗ್ಯಾರಂಟಿ ನಿಮ್ಮಪ್ಪನ ಕೊಡುಗೆಯಲ್ಲ’ ಎಂದು ಕಾರ್ಯಕರ್ತರ ವಿರುದ್ಧ ಪ್ರದೀಪ್ ಈಶ್ವರ್ ರೋಷಾವೇಶ ಮೆರೆದಿದ್ದರು. ಇದಕ್ಕೆ ಕೌಂಟರ್ ಕೊಟ್ಟಿರುವ ಬಿಜೆಪಿ, ತನ್ನ ಟ್ವೀಟರ್ ಖಾತೆಯಲ್ಲಿ ಪ್ರದೀಪ್ ಈಶ್ವರ್ ಗೆ ಚಳಿ ಬಿಡಿಸಿದೆ.
‘ಅಕ್ಸಿಡೆಂಟಲ್ ಎಮ್ಮೆಲ್ಲೆ’ ಎಂದು ಮೂದಲಿಸಿರುವ ಬಿಜೆಪಿ, ಪ್ರದೀಪ್ ಈಶ್ವರ್ ಅಚಾನಕ್ಕಾಗಿ ಎಮ್ಮೆಲ್ಲೆ ಆದರು. ಹೀಗಾಗಿ, ಸರಕಾರ ನಡೆಯುವುದು ಜನರಿಂದ ಎಂಬ ಕಲ್ಪನೆಯೇ ಅವರಿಗೆ ಇಲ್ಲ. ಇದು ಕಾಂಗ್ರೆಸ್ ಸರಕಾರವೂ ಅಲ್ಲ, ಬಿಜೆಪಿ ಸರಕಾರವೂ ಅಲ್ಲ, ಜನರ ಸರಕಾರ ಎಂಬುದನ್ನು ಅರಿತುಕೊಂಡರೆ ಒಳ್ಳೆಯದು ಎಂದು ಟ್ವೀಟ್ ಮಾಡಲಾಗಿದೆ.
ಸರಕಾರದ ನೀತಿಗಳನ್ನು ಟೀಕಿಸುವುದು ಜನರ ಹಕ್ಕು. ಅದನ್ನು ಮೊಟುಕುಗೊಳಿಸಿ, ಜನರ ಮೇಲೆ ವೇದಿಕೆಯ ಮೇಲೆಯೇ ಕೂಗಾಡುವ ಜತೆಗೆ, ಇದು ಯಾರಪ್ಪನ ಸರಕಾರವೂ ಅಲ್ಲ, ಸಿದ್ದರಾಮಯ್ಯನ ಸರಕಾರ ಎಂದು ದರ್ಪ ಮೆರೆದಿದ್ದಾರೆ. ಈ ವರ್ತನೆ ಅವರ ಅಪ್ರಬುದ್ಧತೆಯನ್ನು ತೋರುತ್ತದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.