ಮೈಸೂರು ರೇವ್ ಪಾರ್ಟಿ : ಮೂವರು ಪೊಲೀಸರ ತಲೆದಂಡ
ಮೈಸೂರು: ತಾಲೂಕಿನ ಎಡಹಳ್ಳಿ ಗ್ರಾಮದ
ಕೆಆರ್‌ಎಸ್ ಹಿನ್ನೀರಿನ ಬಳಿಯ ಖಾಸಗಿ ಜಮೀನಿನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣ ಸಂಬಂಧ ಆರು ಜನರನ್ನು ಬಂಧಿಸಲಾಗಿದೆ.
ಇಲವಾಲ ಠಾಣೆಯ ಎಸ್‌ಐ ಎಂ.ಮಂಜುನಾಥ್ ನಾಯಕ್ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ವಿಶೇಷ ಘಟಕದ ಪೇದೆ ನಾರಾಯಣ, ಬೀಟ್ ಸಿಬ್ಬಂದಿ ಪೇದೆ ನಂಜುಂಡ ರಾಜ್ ಅರಸ್ ಅವರನ್ನು ಅಮಾನತುಗೊಳಿಸಿ ಇಲಾಖೆ ವಿಚಾರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಆದೇಶ ಹೊರಡಿಸಿದ್ದಾರೆ.
ಶನಿವಾರ ರಾತ್ರಿ ಕರ್ತವ್ಯದಲ್ಲಿದ್ದ ಎಸ್‌ಐ ಮಂಜುನಾಥ್ ನಾಯಕ್ ಅವರು ತಮ್ಮ ಗಮನಕ್ಕೆ ಘಟನೆಯ ಮಾಹಿತಿ ಬಂದಿಲ್ಲ ಎಂದು ಸಬೂಬು ನೀಡಿದ್ದು, ವಿಶೇಷ ಘಟಕ ಮತ್ತು ಬೀಟ್ ವ್ಯವಸ್ಥೆಯ ಪೇದೆಗಳಾದ ನಾರಾಯಣ ಮತ್ತು ನಂಜುಂಡ ರಾಜ್ ಅರಸ್ ಅವರು ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸಿ ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಲು ವಿಫಲರಾಗಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಅಮಾನತು ಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಪಾರ್ಟಿ ಆಯೋಜಿಸಿದ್ದ ವ್ಯಕ್ತಿ, ಜಮೀನಿನ ಮಾಲೀಕ ಸೇರಿ ಆರು ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜತೆಗೆ ಪಾರ್ಟಿಯಲ್ಲಿ ಇದ್ದ 64 ಜನರ ರಕ್ತದ ಮಾದರಿಯನ್ನು ಸಂಗ್ರಹಿಸಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಶನಿವಾರ ತಡರಾತ್ರಿ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಸಾಮಾಜಿಕ ಜಾಲತಾಣ ಮೂಲಕ ಪ್ರಚಾರ ಸಹ ಮಾಡಿದ್ದರು. ಮಾಹಿತಿ ಮೇರೆಗೆ ಮೈಸೂರು, ಬೆಂಗಳೂರು, ತಮಿಳುನಾಡು ಸೇರಿ ವಿವಿಧೆಡೆಯಿಂದ 20ಕ್ಕೂ ಹೆಚ್ಚು ಜೋಡಿಗಳು ಪಾರ್ಟಿಯಲ್ಲಿ ಪಾಲ್ಗೊಳ್ಳಲು ನೋಂದಣಿ ಮಾಡಿಕೊಂಡಿದ್ದವು. ಈ ಸಂಬಂಧ ಪೊಲೀಸರು 8 ಮಹಿಳೆಯರು ಸೇರಿ 54 ಜನರನ್ನು ವಶಕ್ಕೆ ಪಡೆದಿದ್ದರು. 30 ಕಾರು ಜಪ್ತಿ ಮಾಡಿದ್ದರು.


