ಮೂಢನಂಬಿಕೆಯ ಹಿಂದೆ ಬಿದ್ದ ಕುಟುಂಬಸ್ಥರ ನಿರ್ಧಾರದಿಂದ ತುಂಬುಗರ್ಭಿಣಿ ಸಾವು
ಬೆಂಗಳೂರು: ಮನೆಯವರೆಲ್ಲರ ಮೂಢನಂಬಿಕೆಗೆ ಎಂಟು ತಿಂಗಳ ಗರ್ಭಿಣಿಯೊಬ್ಬರು ಬಲಿಯಾಗಿರುವ ಘಟನೆ ಭಾಗೇಶ್ವರದಲ್ಲಿ ನಡೆದಿದೆ.
ಎಂಟು ತಿಂಗಳ ಗರ್ಭಿಣಿಯೊಬ್ಬರು ಹೆರಿಗೆ ನೋವಿನಿಂದ ರಾತ್ರಿಯಿಡೀ ಮನೆಯಲ್ಲಿ ನರಳಾಟ ನಡೆಸುತ್ತಿದ್ದರು. ಆದರೆ, ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ಯುವ ಬದಲು ಆಕೆಗೆ ಪೂಜೆ ಮಾಡಿಸುವ ಸಲುವಾಗಿ ಪುರೋಹಿತರನ್ನು ಹುಡುಕಾಡುವ ಪ್ರಯತ್ನ ನಡೆಸಿದ್ದರು.
ಗುರುವಾರ ರಾತ್ರಿಯಿಡೀ ನರಳಾಟ ನಡೆಸಿದ ಕೋಮಲ್ ಭಗದ್ವಾಲ್ ಅವರನ್ನು ಶುಕ್ರವಾರ ಬೆಳಗ್ಗೆ ಜಿಲ್ಲಾಸ್ಪತ್ರೆಗೆ ಸೇರಿಸಲಾಯಿತು. ಆದರೆ, ಆಸ್ಪತ್ರೆಗೆ ಬಂದ ಮೂವತ್ತು ನಿಮಿಷಗಳಲ್ಲಿ ಆಕೆ ಸಾವನ್ನಪ್ಪಿದ್ದಾರೆ. ಪರಿಶೀಲನೆ ನಡೆಸಿದ ವೈದ್ಯ ಡಾ.ರಾಜೀವ್ ಉಪಾಧ್ಯಾಯ, ಆಕೆ ರಕ್ತದ ಸಕ್ಕರೆಯ ಮಟ್ಟ 400 ತಲುಪಿದ್ದು, ಜತೆಗೆ ಆಕೆಗೆ ಈ ಹಿಂದೆ ನಡೆಸಿದ್ದ ಮೂರು ಅಗತ್ಯ ಪರೀಕ್ಷೆಗಳನ್ನು ನಡೆಸಿಲ್ಲ. ಇದು ಆಕೆಯ ಸಾವಿಗೆ ಕಾರಣವಾಗಿದೆ ಎಂದು ದೃಢಪಡಿಸಿದ್ದಾರೆ.
ಈ ನಡುವೆ ಆಕೆಯ ಪರೀಕ್ಷೆ ನಡೆಸುತ್ತಿದ್ದ ಎಎನ್ ಎಂ ಉಮಾ ಅಗ್ರಿ, ಆಕೆಯ ರಕ್ತದ ಒತ್ತಡ, ಶುಗರ್ ಮಟ್ಟ ಹಾಗೂ ಅಲ್ಟ್ರಾಸೌಂಡ್ ಪರೀಕ್ಷೆಗಳೆಲ್ಲವು ಎರಡು ದಿನಗಳ ಹಿಂದೆ ಸಾಮಾನ್ಯವಾಗಿಯೇ ಇತ್ತು. ಆದರೆ, ಇದ್ದಕ್ಕಿದ್ದಂತೆ ಬದಲಾವಣೆಯಾಗಲು ಕಾರಣವೇನು? ಎಂದು ಅವರು ಪ್ರಶ್ನಿಸಿದ್ದಾರೆ.
ಒಟ್ಟಾರೆ, ಮನೆಯವರ ಮೌಢ್ಯಕ್ಕೆ ಮಗು ಮತ್ತು ತಾಯಿ ಬಲಿಯಾಗಿದ್ದು, ಪೋಷಕರ ಈ ಮನಸ್ಥಿತಿಗೆ ವೈದ್ಯರು ಛೀಮಾರಿ ಹಾಕಿದ್ದಾರೆ. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆದು ತಂದಿದ್ದರೆ, ತಾಯಿ ಮಗುವಿನ ಪ್ರಾಣ ಉಳಿಯುತ್ತಿತ್ತು ಎಂದು ವೈದ್ಯರು ತಿಳಿಸಿದ್ದಾರೆ.


