ಅಪರಾಧ ಸುದ್ದಿ

ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಮಾದರಿಯಲ್ಲಿ ಮತ್ತೆ ಮೂರು ದೇವಸ್ಥಾನಗಳ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್

Share It

ಬೆಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿಗೆ ಮಾಡಿರುವ ಮಾಸ್ಟರ್ ಪ್ಲಾನ್ ಮಾದರಿಯಲ್ಲಿ ರಾಜ್ಯದ ಮೂರು ದೇವಸ್ಥಾನಗಳ ಅಭಿವೃದ್ಧಿಗೆ ಮುಜರಾಯಿ ಇಲಾಖೆ ಮುಂದಾಗಿದೆ.

ಈಗಾಗಲೇ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೆಡಿಯಾಗಿದೆ. ಅದರ ಭಾಗವಾಗಿ ಪ್ರಸಾದ ನಿಲಯ, ವಸತಿ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆಯ ಸುಧಾರಣೆಗೆ ಯೋಜನೆ ರೂಪಿಸಲಾಗಿದೆ. ಅದರಂತೆ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಮಣ್ಯ, ಸವದತ್ತಿ ಯಲ್ಲಮ್ಮ ದೇವಸ್ಥಾನ, ಕೊಪ್ಪಳದ ಹುಲಿಗೆಮ್ಮ ದೇವಸ್ಥಾನದ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.

ಈ ಮೂರು ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಅಭಿವೃದ್ಧಿ ಅನಿವಾರ್ಯ. ಹೀಗಾಗಿ, ಸವದತ್ತಿ, ಹುಲಿಗೆಮ್ಮ ಹಾಗೂ ಘಾಟಿ ಸುಬ್ರಮಣ್ಯ ದೇವಸ್ಥಾನದ ಅಭಿವೃದ್ಧಿ ಮಾಡಲಾಗುತ್ತದೆ. ಅಲ್ಲಿನ ವ್ಯವಸ್ಥೆಗಳನ್ನು ಸುಧಾರಿಸಿ ಭಕ್ತಿಗೆ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.

ಕ್ಷೇತ್ರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಪ್ರಸಾದ ನಿಲಯ ನಿರ್ಮಾಣ, ವಸತಿ ಸಮುಚ್ಚಯ ಗಳ ನಿರ್ಮಾಣ, ಪಾರ್ಕಿನಲ್ಲಿ ವ್ಯವಸ್ಥೆಯ ಸುಧಾರಣೆ, ಕ್ಯೂ ಕಂಫಾರ್ಟಮೆಂಟ್ ಗಳ ನಿರ್ಮಾಣಕ್ಕೆ ಸೂಕ್ತ ಯೋಜನೆ ರೂಪಿಸಲಾಗಿದೆ. ಭವಿಷ್ಯದ ದೃಷ್ಟಿಯಿಂದ ಈ ಯೋಜನೆ ರೂಪಿಸಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಾಗುವ ಭಕ್ತರ ಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈಗ 700 ಜನ ಕೂರಲಷ್ಟೇ ಪ್ರಸಾದ ಭವನದ ವ್ಯವಸ್ಥೆ ಇದೆ. ಅದನ್ನು 3000 ಜನರಿಗೆ ಹೆಚ್ಚಿಸುವ ಕುರಿತು ಮಾಸ್ಟರ್ ಪ್ಲಾನ್ ರೂಪಿಸಿದೆ. ಅದೇ ಮಾದರಿಯಲ್ಲಿ ಎಲ್ಲ ದೇವಸ್ಥಾನಗಳ ಪ್ರಸಾದ ಭವನಗಳು ಅಭಿವೃದ್ಧಿ ಆಗಲಿವೆ ಎಂದು ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.


Share It

You cannot copy content of this page