ಕ್ರೀಡೆ ಸುದ್ದಿ

ಚಾಂಪಿಯನ್ಸ್ ಟ್ರೋಫಿ-2025: ದಕ್ಷಿಣ ಆಫ್ರಿಕಾ ಸೋಲಿಸಿ ಫೈನಲ್ ಪ್ರವೇಶಿಸಿದ ನ್ಯೂಜಿಲೆಂಡ್

Share It

ಲಾಹೋರ್; ಪಾಕಿಸ್ತಾನದ ಲಾಹೋರ್ ನಗರದ ಗಡಾಫಿ ಸ್ಟೇಡಿಯಂನಲ್ಲಿ ಇಂದು ನಡೆದ ಚಾಂಪಿಯನ್ಸ್ ಟ್ರೋಫಿ-2025ರ 2ನೇ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ದಕ್ಷಿಣ ಆಫ್ರಿಕಾ ತಂಡವನ್ನು 50 ರನ್ ಗಳಿಂದ ಸೋಲಿಸಿ ಫೈನಲ್ ತಲುಪಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ನಿಗದಿತ 50 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 362 ರನ್ ಗಳಿಸಿತು‌. ಕರ್ನಾಟಕ ಮೂಲದ ರಚಿನ್ ರವೀಂದ್ರ 108 ರನ್, ಕೇನ್ ವಿಲಿಯಮ್ಸ್ 102 ರನ್, ಮಿಚೆಲ್ 49 ರನ್ ಹಾಗೂ ಕಡೆಯಲ್ಲಿ ಗ್ಲೆನ್ ಫಿಲಿಪ್ಸ್ ಅಜೇಯ 49 ರನ್ ಹೊಡೆದ ಪರಿಣಾಮ ನ್ಯೂಜಿಲೆಂಡ್ 50 ಓವರುಗಳಲ್ಲಿ 362 ರನ್ ದಾಖಲಿಸಿತು.

ದಕ್ಷಿಣ ಆಫ್ರಿಕಾ ಪರ ಬೌಲಿಂಗ್ ನಲ್ಲಿ ವೇಗದ ಬೌಲರ್ ಗಳಾದ ನಿಗ್ಡಿ 3 ವಿಕೆಟ್ ಹಾಗೂ ಕಗಿಸೊ ರಬಾಡಾ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಗಳೆನಿಸಿದರು.

ಬಳಿಕ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ 20 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡರೂ ನಾಯಕ ಬವುಮಾ ಮತ್ತು ಡಸನ್ ಅವರ ಬ್ಯಾಟಿಂಗ್ ನಿಂದ 125 ರನ್ ವರೆಗೆ ಸ್ಕೋರ್ ಒಯ್ದಾಗ 2ನೇ ವಿಕೆಟ್ ಪತನವಾಯಿತು. ಆದರೂ ಮರ್ಕಮ್ ಮತ್ತು ಡಸನ್ 3ನೇ ವಿಕೆಟ್ ಗೆ ಉತ್ತಮ ಜೊತೆಯಾಟವಾಡಿ ಸ್ಕೋರ್ 161 ರನ್ ವರೆಗೆ ಒಯ್ದರೂ ಆನಂತರ ವಿಕೆಟ್ ಉದುರುಲಾರಂಭಿಸಿದವು. ನಾಯಕ ಬವುಮಾ 56 ರನ್, ಡಸನ್ 69 ರನ್, ಮರ್ಕಮ್ 31 ರನ್ ಗಳಿಸಿ ಕೊಂಚ ಪ್ರತಿರೋಧದ ಬ್ಯಾಟಿಂಗ್ ನಡೆಸಿದರು. ತದನಂತರ ವಿಕೆಟ್ ಬೀಳುತ್ತಾ ಸಾಗಿ ನ್ಯೂಜಿಲೆಂಡ್ ಗೆಲ್ಲುವುದು ಖಚಿತವಾಗತೊಡಗಿತು. ಇಷ್ಟಾದರೂ ಸಹ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್ ಕೊನೆಯವರೆಗೂ ಔಟಾಗದೆ ಬ್ಯಾಟ್ ಮಾಡಿ ಅಜೇಯ 100 ರನ್ ಗಳಿಸಿದ ಪರಿಣಾಮ ದಕ್ಷಿಣ ಆಫ್ರಿಕಾ ನಿಗದಿತ 50 ಓವರುಗಳಲ್ಲಿ 9 ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿ 50 ರನ್ ಗಳಿಂದ ಸೋಲೊಪ್ಪಿಕೊಂಡಿತು. ಇಷ್ಟಾದರೂ ಕೇವಲ 67 ಎಸೆತಗಳಲ್ಲಿ 10 ಬೌಂಡರಿ, 4 ಭರ್ಜರಿ ಸಿಕ್ಸರ್ ಬಾರಿಸಿ ಅಜೇಯ 100 ರನ್ ಬಾರಿಸಿದರು.

ನ್ಯೂಜಿಲೆಂಡ್ ಪರ ಬೌಲಿಂಗ್ ನಲ್ಲಿ ಮೈಕಲ್ ಸ್ಯಾಂಟ್ನರ್ 3 ವಿಕೆಟ್ ಹಾಗೂ ಹೆನ್ರಿ-ಫಿಲಿಪ್ಸ್ ತಲಾ 2 ವಿಕೆಟ್ ಪಡೆದು ಯಶಸ್ವಿಯಾಗಿ ಹರಿಣಗಳ ಬ್ಯಾಟಿಂಗ್ ಸೊಲ್ಲೆತ್ತದಂತೆ ನೋಡಿಕೊಂಡರು. ಕೊನೆಯಲ್ಲಿ ಇನಿಂಗ್ಸ್ ಆರಂಭಲ್ಲೇ ಬಿರುಸಿನ ನಿರ್ಣಾಯಕ ಶತಕ ಗಳಿಸಿದ್ದಕ್ಕಾಗಿ ಕರ್ನಾಟಕ ಮೂಲದ ಬ್ಯಾಟ್ಸ್‌ಮನ್ ರಚಿನ್ ರವೀಂದ್ರ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು.

ಇದೇ ಮಾರ್ಚ್ 9 ರ ಮಧ್ಯಾಹ್ನ 2 ಗಂಟೆಯಿಂದ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಫೈನಲ್ ಪಂದ್ಯದಲ್ಲಿ ಸೆಣಸಾಡಲಿವೆ. ದುಬೈನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಟಾಸ್ ಗೆಲ್ಲುವ ತಂಡವೇ ಗೆಲ್ಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದೇ ಭಾನುವಾರ ಮಧ್ಯಾಹ್ನ 2:30 ರಿಂದ ಚಾಂಪಿಯನ್ಸ್ ಟ್ರೋಫಿ-2025 ರ ಫೈನಲ್ ಆರಂಭವಾಗಲಿದೆ. ಫೈನಲ್ ಪಂದ್ಯದಲ್ಲಿ ಲೀಗ್ ಹಂತದ ಕೊನೆಯ ಮ್ಯಾಚ್ ಸೋತು ಟೀಂ ಇಂಡಿಯಾ ಆಟವನ್ನು ಅವಲೋಕಿಸಿರುವ ನ್ಯೂಜಿಲೆಂಡ್ ಫೈನಲ್ ನಲ್ಲಿ ಗೆಲುವು ಸಾಧಿಸಿ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿಯಲು ಸಜ್ಜಾಗಿದೆ.


Share It

You cannot copy content of this page