ಜಾತಿ ಗಣತಿ ಮರುಸಮೀಕ್ಷೆಗೆ ಸಿದ್ಧಲಿಂಗ ಶ್ರೀಗಳ ಒತ್ತಾಯ
ತುಮಕೂರು: ಕಳೆದ 10 ವರ್ಷಗಳ ಹಿಂದೆ ನಡೆದ ಜಾತಿ ಜನಗಣತಿಯನ್ನು ಈಗ ಒಪ್ಪಬಾರದು. ಮತ್ತೊಮ್ಮೆ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕು ಎಂದು ಸಿದ್ಧಗಂಗಾ ಮಠಾಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿ ರಾಜ್ಯಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಗರದ ಸಿದ್ದಗಂಗಾ ಮಠದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ ಏನೆಲ್ಲಾ ಬದಲಾವಣೆ ಆಗಿರಬಹುದು. ಜನಸಂಖ್ಯೆ ಸಹ ಹೆಚ್ಚಳವಾಗಿದೆ. ಇದನ್ನು ಸೂಕ್ಷ್ಮವಾಗಿ ಅರಿತು ಮರು ಸಮೀಕ್ಷೆ ಮಾಡಿಸಬೇಕು ಎಂದರು.
ಬಹುತೇಕರು ತಮ್ಮ ಮನೆಗೆ ಸಮೀಕ್ಷೆ ಮಾಡಲು ಬಂದಿಲ್ಲ. ನಮಗೆ ವಿಚಾರವೇ ಗೊತ್ತಿಲ್ಲ, ತಿಳಿದಿಲ್ಲ ಎಂದು ಹೇಳುತ್ತಿದ್ದಾರೆ. ತಮ್ಮನ್ನು ಯಾರೂ ಭೇಟಿ ಮಾಡಿ ಮಾಹಿತಿ ಪಡೆದುಕೊಂಡಿಲ್ಲ. ಜಾತಿ ಜನಗಣತಿ ಬಗ್ಗೆ ಉಂಟಾಗಿರುವ ಗೊಂದಲ ನಿವಾರಿಸಿ, ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರನ್ನೂ ಭೇಟಿ ಮಾಡಿ ಸಮೀಕ್ಷೆ ಮಾಡಿಸಬೇಕು. ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ಹೇಳಿದರು.


