ನವದೆಹಲಿ: ಬಿಜೆಪಿ ನಿಯೋಗವು ಇದೇ 10ರಂದು ಮದ್ದೂರಿಗೆ ಭೇಟಿ ಕೊಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.
ನಾನು, ನಮ್ಮ ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್, ಪಕ್ಷದ ಮುಖಂಡರು ಈ ನಿಯೋಗದಲ್ಲಿ ಇರುವರು ಎಂದು ಅವರು ಪರಿಷ್ಕøತ ಪ್ರವಾಸದ ಕುರಿತು ಮಾಹಿತಿ ನೀಡಿದ್ದಾರೆ.
ಮದ್ದೂರಿನ ಗಲಭೆಕೋರರನ್ನು ಕೂಡಲೇ ಬಂಧಿಸುವಂತೆ ಅವರು ಒತ್ತಾಯಿಸಿದ್ದಾರೆ. ಹಲವರಿಗೆ ಗಂಭೀರ ಗಾಯಗಳಾಗಿವೆ. ಹೆಣ್ಮಕ್ಕಳ ಮೇಲೆ ಲಾಠಿಚಾರ್ಜ್ ಮಾಡಿದ್ದಾರೆ. ಅವರನ್ನು ಮತ್ತು ಕುಟುಂಬಸ್ಥರನ್ನು ಭೇಟಿ ಮಾಡಿ ಧೈರ್ಯ ತುಂಬಲಿದ್ದೇವೆ ಎಂದು ನುಡಿದರು. ಮದ್ದೂರಿಗೆ ತೆರಳಿ ಹಿಂದೂ ಸಮಾಜಕ್ಕೆ ಧೈರ್ಯ ತುಂಬುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರ ಹೇಳಿಕೆ ಗಮನಿಸಿದರೆ ಮೈ ಉರಿಯುತ್ತದೆ. ಹೆಣ್ಮಕ್ಕಳ ಮೇಲೆ ಲಾಠಿಚಾರ್ಜ್ ಸಣ್ಣಪುಟ್ಟ ಘಟನೆ ಎಂದು ಗೃಹ ಸಚಿವರು ಹೇಳಿಕೆ ನೀಡುತ್ತಾರೆ ಎಂದು ಅವರು ಖಂಡಿಸಿದ್ದಾರೆ.