ಬೆಂಗಳೂರು: ರಾಜ್ಯಕ್ಕೆ ಎಲೆಕ್ಟ್ರಿಕ್ ಬಸ್ಸುಗಳನ್ನು ನೀಡಲು ಒಪ್ಪಿಗೆ ಸೂಚಿಸಿದ ಕೇಂದ್ರದ ನಿರ್ಧಾರವನ್ನು ಪ್ರಶಂಸಿಸಿ ಬಿಜೆಪಿ ಮಾಡಿದ್ದ ಟ್ವೀಟ್ ಗೆ ಕಾಂಗ್ರೆಸ್ ಕಿಡಿಕಾರಿದೆ.
ಕೇಂದ್ರ ಸರಕಾರ ಖಾಸಗಿಯವರಿಂದ ಬಾಡಿಗೆಗೆ ಪಡೆದು ಸಾರಿಗೆ ಸಂಸ್ಥೆಗಳಿಗೆ ನೀಡಿರುವುದನ್ನು ಕೇಂದ್ರ ಸರ್ಕಾರ ಬಸ್ ಖರೀದಿ ಮಾಡಿ ಸಾರಿಗೆ ಸಂಸ್ಥೆಗಳಿಗೆ ನೀಡಿದೆ ಎಂದು ತಪ್ಪಾಗಿ ಅರ್ಥೈಸಿ ಬೊಬ್ಬೆ ಹೊಡೆಯುವುದನ್ನು ಬಿಟ್ಟು ಬಾಡಿಗೆ/ಲೀಸ್ ಮತ್ತು ಖರೀದಿಯ ವ್ಯತ್ಯಾಸವನ್ನಾದರೂ ತಿಳಿಯಬೇಡವೇ? ಎಂದು ಟೀಕಿಸಿದೆ.
ಈ ಕುರಿತು ಎಕ್ಸ್ ನಲ್ಲಿಯೇ ಕೌಂಟರ್ ಕೊಟ್ಟಿರುವ ಕಾಂಗ್ರೆಸ್, PM e-Drive / PM e-Seva ಯೋಜನೆಯಡಿ ಸಾರಿಗೆ ಸಂಸ್ಥೆಗಳಿಗೆ 5250 ಎಲೆಕ್ಟ್ರಿಕ್ ಬಸ್ಸುಗಳನ್ನು ಕೇಂದ್ರ ಸರ್ಕಾರ ಖರೀದಿಸಿ ನೀಡಿದೆ ಎಂಬ ಭ್ರಮೆಯಲ್ಲಿ ತಪ್ಪು ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ನೀವು ಹಂಚಿಕೊಂಡು ಸಂಭ್ರಮಿಸಿದ ವಾಸ್ತವ ಸತ್ಯ ಏನೆಂದು ನಿಮಗೆ ಗೊತ್ತೇ ಎಂದು ಪ್ರಶ್ನಿಸಿದೆ.

ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ಬಸ್ಸುಗಳನ್ನು ಖರೀದಿಸಲು ಖಾಸಗಿ ಕಂಪನಿಗಳಿಗೆ ಅಂದರೆ ಒಲೆಕ್ಟ್ರಾ, ಜೆ.ಬಿ.ಎಂ, ಟಾಟಾ, ಸ್ವಿಪ್ಟ್ ಮೊಬಿಲಿಟಿ ಅವರಿಗೆ ಅನುದಾನ ನೀಡಿ, ಖಾಸಗಿಯವರು ಸಾರಿಗೆ ಸಂಸ್ಥೆಗಳಿಗೆ ಆ ಬಸ್ಸುಗಳನ್ನು ಬಾಡಿಗೆಗೆ/ಲೀಸ್ ಆಧಾರದಲ್ಲಿ ಇಂತಿಷ್ಟು ವರ್ಷಗಳಿಗೆ ಎಂದು ನೀಡುತ್ತಿದ್ದಾರೆ ಎಂಬುದು ತಮಗೆ ತಿಳಿದಿದೆಯೇ?
ಕೇಂದ್ರ ಸರ್ಕಾರವು ಅನುದಾನವನ್ನು ಖಾಸಗಿಯವರಿಗೆ ನೀಡಿ, ಸಾರಿಗೆ ಸಂಸ್ಥೆಗಳಿಗೆ ಶೂನ್ಯ ಅನುದಾನ ನೀಡುತ್ತಿರುವ ಬಗ್ಗೆ ಅರಿವಿದೆಯೇ? ಎಂದು ಪ್ರಶ್ನಿಸಿದೆ.
ಎಲೆಕ್ಟ್ರಿಕ್ ಬಸ್ಸುಗಳ ಚಾಲಕರು ಖಾಸಗಿಯವರು, ಬಸ್ಸುಗಳ ನಿರ್ವಹಣೆ ಖಾಸಗಿಯವರದ್ದು, ಸಾರಿಗೆ ಸಂಸ್ಥೆಗಳವರದ್ದಲ್ಲ ಎಂಬುದರ ಬಗ್ಗೆ ಏನಾದರೂ ಮಾಹಿತಿಯಿದೆಯೇ? ಎಲೆಕ್ಟ್ರಿಕ್ ಬಸ್ ಘಟಕ ಮತ್ತು ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸಲು ಯಾವುದೇ ಆರ್ಥಿಕ ಅನುದಾನವನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ ಎಂಬುದು ನಿಮಗೆ ಗೊತ್ತೇ? ಎಂದು ಟೀಕಿಸಿದೆ.

ರಾಜ್ಯದ ಕೌಶಲ್ಯಪೂರ್ಣ ಮಾನವಶಕ್ತಿ ಬಳಸಿಕೊಳ್ಳಲು, ಸಂಪನ್ಮೂಲಗಳನ್ನು ಅತ್ಯುತ್ತಮವಾಗಿಸಲು, ಸಾರಿಗೆ ಸಂಸ್ಥೆಗಳನ್ನು ಬಲಗೊಳಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸದೆ ಖಾಸಗೀಕರಣದೆಡೆಗೆ ಮುಖ ಮಾಡಿದೆ ಇದನ್ನು ನೀವು ಒಪ್ಪುತ್ತೀರಾ? ದೇಶದ್ಯಾದಂತ ಎಲ್ಲ ನಗರಗಳಿಗೆ ಸೇರಿ PM e- Drive ನಲ್ಲಿ 10,900 ಎಲೆಕ್ಟ್ರಿಕ್ ಬಸ್ಸುಗಳನ್ನು ಘೋಷಣೆ ಮಾಡಲಾಗಿದೆ. ಅದರಲ್ಲಿ ನಮ್ಮ ರಾಜ್ಯಕ್ಕೆ 4,500 ಬಸ್ಸುಗಳನ್ನು ನೀಡಿರುವುದು (PM e -Seva ಹೊರತುಪಡಿಸಿ) ನಮ್ಮ ರಾಜ್ಯದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಆಸಕ್ತಿ ಮತ್ತು ನಿರಂತರ ಪ್ರಯತ್ನದ ಫಲ ಎಂಬ ಅರಿವಿದೆಯೇ? ಎಂದು ಪ್ರಶ್ನಿಸಿದೆ.
ದೇಶದ ಬೇರೆ ಯಾವುದೇ ರಾಜ್ಯಗಳು ಎಲೆಕ್ಟ್ರಿಕ್ ಬಸ್ಸುಗಳ ಕಾರ್ಯಾಚರಣೆ ಬಗ್ಗೆ ಆಸಕ್ತಿ ತೋರದಿರುವುದರಿಂದ ಕರ್ನಾಟಕ ರಾಜ್ಯಕ್ಕೆ ಹೆಚ್ಚಿನ ಎಲೆಕ್ಟ್ರಿಕ್ ಬಸ್ಸುಗಳ ಘೋಷಣೆಯಾಗಿದೆ. UPA ಸರ್ಕಾರದ ಹತ್ತು ವರ್ಷದ ಆಡಳಿತದಲ್ಲಿ ಮನಮೋಹನ್ ಸಿಂಗ್ ಅವರು ಸಾರಿಗೆ ಸಂಸ್ಥೆಗಳನ್ನು ಸದೃಢಗೊಳಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಕೆಲವೊಂದು ವಿಷಯಗಳನ್ನು ನೆನಪಿಸುವುದು ಈ ಸಮಯದಲ್ಲಿ ಸಮಂಜಸ ಎನಿಸುತ್ತದೆ ಎಂದು ಕಾಂಗ್ರೆಸ್ ಹೇಳಿದೆ.
ಬೆಂಗಳೂರು ನಗರದಾದ್ಯಂತ 10 ಮತ್ತು ಮೈಸೂರು ನಗರದಲ್ಲಿ 7 ಟಿ.ಟಿ.ಎಂ.ಸಿ ಗಳನ್ನು ನಿರ್ಮಿಸಲು ಅನುದಾನವನ್ನು ನೀಡಿದ್ದರು. ಇಂದು ಅವುಗಳ ಮೌಲ್ಯ ರೂ. 10,000 ಸಾವಿರ ಕೋಟಿ ದಾಟುತ್ತದೆ. ದೇಶದ್ಯಾಂತ ಸಣ್ಣ ಮತ್ತು ಮಧ್ಯಮ ನಗರಗಳಲ್ಲಿ ನಗರ ಸಾರಿಗೆ ಬಸ್ಸುಗಳ ಕಾರ್ಯಾಚರಣೆ ಪ್ರಾರಂಭಗೊಂಡಿದ್ದೇ ಮನಮೋಹನ ಸಿಂಗ್ ರವರ ಸರ್ಕಾರದ ಅವಧಿಯಲ್ಲಿ ಎಂಬುದು ನೆನಪಿದೆಯೇ? ಎಂದು ಗುಡುಗಿದೆ.

ಅಂದು ಕೆಎಸ್ ಆರ್ ಟಿ ಸಿ, ಬಿ.ಎಂ.ಟಿ.ಸಿ, ವಾಯವ್ಯ ಸಾರಿಗೆ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗಳಿಗೆ ಒಟ್ಟು 2685 ನಗರ ಸಾರಿಗೆ ಬಸ್ಸುಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಶೇ.80ರ ವರೆಗೆ ಅನುದಾನ ನೀಡಿತ್ತು. ಇದರ ಫಲವಾಗಿ ಇಂದು ರಾಜ್ಯದ 31 ಜಿಲ್ಲೆಗಳಲ್ಲೂ ಉದಾಹರಣೆಗೆ ಕಲಬುರಗಿ, ಕೊಪ್ಪಳ, ಹುಬ್ಬಳ್ಳಿ, ಧಾರವಾಡ, ಹಾಸನ,ಬೆಳಗಾವಿ, ತುಮಕೂರು, ದಾವಣಗೆರೆ, ಶಿವಮೊಗ್ಗ ಹಾಗೂ ಇತರೆ ಪಟ್ಟಣಗಳಲ್ಲಿ ನೂರಾರು ಸಂಖ್ಯೆಯಲ್ಲಿ ನಗರ ಸಾರಿಗೆ ಬಸ್ಸುಗಳನ್ನು ನೋಡಬಹುದಾಗಿದೆ ಎಂದಿದೆ.
ಯಾವುದೇ ಮಾಹಿತಿಯನ್ನು ನಿಖರವಾಗಿ ತಿಳಿದುಕೊಳ್ಳದೇ, ವೃಥಾ ಪ್ರಚಾರ ಪಡೆಯುವ ಮನಸ್ಥಿತಿಯಿಂದ, ಅಪಪ್ರಚಾರದಲ್ಲಿ ತೊಡಗಿರುವ ನಿಮ್ಮ ದುರ್ಬುದ್ದಿಗೆ ಆದಷ್ಟು ಬೇಗ ಸರಿಯಾದ ಔಷಧ ಹುಡುಕಿಕೊಳ್ಳಿ ಎಂದು ಟೀಕಿಸಿರುವ ಕಾಂಗ್ರೆಸ್ ಬಿಜೆಪಿ ಖಾತೆಯನ್ನು ಟ್ಯಾಗ್ ಮಾಡಿದೆ.

