ಹಾಸನ: ಹಾಸನದ ಕಾಟೇಹಳ್ಳಿಯಲ್ಲಿರುವ ಡೆಕ್ಕನ್ ವ್ಯಾಲಿ ಇಂಟರ್ ನ್ಯಾಶನಲ್ ಶಾಲೆಯ ವತಿಯಿಂದ 70 ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ರವಿ ನಾಕಲಗೂಡು, ಕನ್ನಡದ ಉಳಿವಿನ ಹಿಂದೆ ನಮ್ಮೆಲ್ಲರ ಉಳಿವು ಅಡಗಿದೆ. ಕನ್ನಡ ಉಳಿದರಷ್ಟೇ ನಾವು ಉಳಿಯುತ್ತೇವೆ. ಇದರ ಅರಿವು ನಮಗಿರಬೇಕು ಎಂದು ತಿಳಿಸಿದರು.
ಬೆಂಗಳೂರಿನಂತಹ ಮಹಾನಗರಗಳಿಗೆ ಹೋದರೆ, ನಾನು ಕನ್ನಡ ನಾಡಿನಲ್ಲಿದ್ದೇವಾ ಎಂಬ ಅನುಮಾನ ಒಂದು ಕ್ಷಣ ನಮ್ಮನ್ನು ಕಾಡುತ್ತದೆ. ಅಷ್ಟರಮಟ್ಟಿಗೆ ಅಲ್ಲಿ ಕನ್ನಡದ ಕಣ್ಮರೆಯಾಗಿದೆ. ಕನ್ನಡ ಉಳಿದಿರುವುದೇ ನಮ್ಮಂತಹ ಗ್ರಾಮೀಣ ಪ್ರದೇಶದ ಜನರಿಂದ ಎನ್ನಬಹುದು. ಇದರ ನಡುವೆಯೂ, ಕನ್ನಡತನವನ್ನು ಉಳಿಸಿಕೊಂಡು, ಇಂಗ್ಲೀಷ್ ಶಿಕ್ಷಣ ನೀಡುತ್ತಿರುವ ಡೆಕ್ಕನ್ ಶಾಲೆಯ ಕ್ರಮ ಸ್ವಾಗತಾರ್ಹ ಎಂದು ತಿಳಿಸಿದರು.
ಗಣ್ಯರು ಮೊದಲಿಗೆ ಕನ್ನಡ ಧ್ವಜಾರೋಹಣ ನಡೆಸಿದರು. ಮಕ್ಕಳು ವಿವಿಧ ವೇಷ ಭಾಷಣಗಳ ಮೂಲಕ ಗಮನ ಸೆಳೆದರು. ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಮೂರ್ತಿ, ಹಾಸನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಂಜು ಹಿರೀಬಿಳ್ತಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಂ.ಜಿ.ಆರ್. ಅರಸ್, ಬಾ.ನಂ.ಲೋಕೇಶ್, ಮಾನಸಿಕ ಆರೋಗ್ಯ ತಜ್ಞೆಯಾದ ಡಾ. ಸುನೀತಾ, ಮುಖಂಡರಾದ ರಾಜೇಂದ್ರ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
