ನವದೆಹಲಿ: ಲಡಾಖ್‌ನ ಡೆಪ್ಸಾಂಗ್ ಮತ್ತು ಡೆಮ್‌ಚೋಕ್ ಪ್ರದೇಶಗಳಲ್ಲಿ ಭಾರತ ಮತ್ತು ಚೀನಾದ ಪಡೆಗಳ ಹಿಂಪಡೆಯುವಿಕೆ ಪ್ರಕ್ರಿಯೆ ಪೂರ್ಣಗೊಳಿಸಲಿದ್ದು, ಅ.30ರಿಂದ ಗಸ್ತು ಪುನರಾರಂಭಗೊಳ್ಳಲಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಪೂರ್ವ ಲಡಾಕ್ ಗಡಿ ಬಿಕ್ಕಟ್ಟು ಶಮನಗೊಳಿಸಲು ಎರಡೂ ದೇಶಗಳು ಒಪ್ಪಂದಕ್ಕೆ ಬಂದ ಬೆನ್ನಲ್ಲೇ ಉಭಯ ದೇಶಗಳಿಂದ ಸೇನಾ ವಾಪಸಾತಿ ಪ್ರಕ್ರಿಯೆ ಶುರುವಾಗಿದೆ. ಸೇನಾ ಪರಿಕರಗಳನ್ನು ಹಿಂಪಡೆಯಲು ಎರಡೂ ಕಡೆಯ ಸೇನೆಗಳು ಚಾಲನೆ ನೀಡಿವೆ ಎಂದು ಮೂಲಗಳು ತಿಳಿಸಿವೆ.
ಟೆಂಟ್‌ಗಳನ್ನು ಮತ್ತು ತಾತ್ಕಾಲಿಕ ಶಿಬಿರಗಳನ್ನು ಹಿಂಪಡೆಯಲಾಗುತ್ತಿದೆ. ವಾಹನಗಳನ್ನು ಸಹ ಬ್ಯಾಚ್‌ಗಳಲ್ಲಿ ಹಿಂತಿರುಗಿಸಲಾಗುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಕಾರ್ಪ್ಸ್ ಕಮಾಂಡರ್‌ಗಳ ನಡುವಿನ ಒಪ್ಪಂದಕ್ಕೆ ಸೋಮವಾರ ಸಹಿ ಹಾಕಲಾಗಿದ್ದು, ಶಿಬಿರಗಳನ್ನು ಹಿಂಪಡೆಯುವ ಕಾರ್ಯ ಬುಧವಾರ ಪ್ರಾರಂಭವಾಗಿದೆ. ಅ.29 ರೊಳಗೆ ಸಂಪೂರ್ಣ ಪ್ರಕ್ರಿಯೆಯು ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅಕ್ಟೋಬರ್ 30 ರಿಂದ ಗಸ್ತು ಪುನರಾರಂಭಿಸಲು ನಿರ್ಧರಿಸಲಾಗಿದೆ.
ರಾಜತಾಂತ್ರಿಕ ಹಾಗೂ ಸೇನಾ ಮಟ್ಟದ ಮಾತುಕತೆ ಬಳಿಕ ಕಳೆದ ಸೋಮವಾರ ಎರಡೂ ದೇಶಗಳು ಪೂರ್ವ ಲಡಾಕ್ ಗಡಿಯಲ್ಲಿ ಗಸ್ತು ನಡೆಸುವ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿದ್ದವು.