ಎರ್ನಾಕುಲಂ(ಕೇರಳ): ಸರಕಾರಿ ಆಸ್ಪತ್ರೆ ಎಂದ್ರೆ ಮೂಗು ಮುರಿಯುವ ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಹೆಗ್ಗುರುತೊಂದು ದಾಖಲಾಗಿದೆ. ಕೇರಳದ ತಿರುವನಂತಪುರದಿಂದ ಕೊಚ್ಚಿಗೆ ಜೀವಂತ ಹೃದಯವನ್ನು ಹೆಲಿಕಾಪ್ಟರ್‌ನಲ್ಲಿ ಸಾಗಿಸಿ, ನೇಪಾಳದ 22 ವರ್ಷದ ಯುವತಿಗೆ ಕಸಿ ಮಾಡಿ ಹೊಸ ಜೀವನ ನೀಡಲಾಗಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಈ ಸಾಹಸದ ಮೂಲಕ ಹೃದಯ ಕಸಿ ನಡೆಸಿದ ದೇಶದ ಮೊದಲ ಪ್ರಕರಣ ಇದಾಗಿದೆ. ಈ ಕಾರ್ಯಾಚರಣೆಗೆ ಸೇನೆ ಸಹ ನೆರವು ನೀಡಿತ್ತು. ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ ಮೆದುಳು ಹಾನಿಯಾಗಿ ಮೃತಪಟ್ಟ ದಾನಿಯಿಂದ ಸಂಗ್ರಹಿಸಲಾದ ಹೃದಯವನ್ನು ರಾಜ್ಯ ಸರ್ಕಾರಿ ಹೆಲಿಕಾಪ್ಟರ್‌ನಲ್ಲಿ ತರಲಾಯಿತು. ಮಧ್ಯಾಹ್ನ 2:50ಕ್ಕೆ ಕೊಚ್ಚಿಯ ಗ್ರ್ಯಾಂಡ್ ಹಯಾತ್ ಹೆಲಿಪ್ಯಾಡ್‌ನಲ್ಲಿ ಅದು ಇಳಿಯಿತು. ಅಲ್ಲಿಂದ, ಜೀರೋ ಟ್ರಾಫಿಕ್ ಮೂಲಕ ಆಂಬ್ಯುಲೆನ್ಸ್ನಲ್ಲಿ ಎರ್ನಾಕುಲಂ ಸರ್ಕಾರಿ ಆಸ್ಪತ್ರೆಗೆ ತರಲಾಯಿತು. ಅಲ್ಲಿ ನೇಪಾಳದ ಯುವತಿಗೆ ಹೃದಯ ಕಸಿ ನಡೆಸಲಾಗಿದೆ.
ದುರ್ಗಾ ಕಾಮಿ ಎಂಬ ನೇಪಾಳಿ ಯುವತಿಗೆ ತುರ್ತು ಹೃದಯ ಕಸಿ ಮಾಡಲಾಗಿದೆ. ಆಕೆ ಹೈಪರ್ಟ್ರೋಫಿಕ್ ಕಾರ್ಡಿಯೊಮಯೋಪತಿ ಎಂಬ ಕಾಯಿಲೆಗೆ ತುತ್ತಾಗಿದ್ದಳು. ಇದು ಹೃದಯದ ಸ್ನಾಯುಗಳು ಅಸಹಜವಾಗಿ ಊದಿಕೊಳ್ಳುವ ಸ್ಥಿತಿ. ಆನುವಂಶಿಕ ಸಮಸ್ಯೆಯಾಗಿದ್ದು, ಆಕೆಯ ತಾಯಿ ಮತ್ತು ಅಕ್ಕ ಇಬ್ಬರೂ ಇದೇ ಕಾಯಿಲೆಯಿಂದ ಸಾವಿಗೀಡಾಗಿದ್ದರು. ಕುಟುಂಬದಲ್ಲಿ ಸದ್ಯ ತಮ್ಮ ಮತ್ತು ಈಕೆ ಮಾತ್ರ ಬದುಕುಳಿದಿದ್ದು, ಅನಾಥಾಶ್ರಮದಲ್ಲಿ ಆಶ್ರಯ ಪಡೆದಿದ್ದಾರೆ.
ಈಕೆಯ ಸಮಸ್ಯೆ ಅರಿತ ಅನಾಥಾಶ್ರಮದಲ್ಲಿ ಕೆಲಸ ಮಾಡುವ ಮಲಯಾಳಿ ಸಿಬ್ಬಂದಿ ಕೇರಳದಲ್ಲಿ ಇದಕ್ಕೆ ಚಿಕಿತ್ಸೆ ಒದಗಿಸಲು ಇಲ್ಲಿಗೆ ಆಕೆಯನ್ನು ಕರೆತಂದಿದ್ದಾರೆ. ನೇಪಾಳಿ ಪ್ರಜೆಯಾದ ಕಾರಣ ಆಕೆಗೆ ವೈದ್ಯಕೀಯ ವಿನಾಯಿತಿ ನೀಡಲು ಹೈಕೋರ್ಟ್ ಮೂಲಕ ಅನುಮತಿ ಪಡೆಯಲಾಗಿತ್ತು. ಹೊಂದಾಣಿಕೆಯ ದಾನಿ ಸಿಕ್ಕ ಬಳಿಕ ಹೃದಯ ಕಸಿ ಮಾಡಲು ಕೋರ್ಟ್ ಅವಕಾಶ ನೀಡಿತ್ತು.
ಕೊಲ್ಲಂನ ಚಿರಕ್ಕರ ಮೂಲದ 46 ವರ್ಷದ ದಾನಿಯೊಬ್ಬರು ಡಿಸೆಂಬರ್ 21ರಂದು ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯತೆಗೆ ತುತ್ತಾಗಿ ಸಾವನ್ನಪ್ಪಿದ್ದರು. ಅವರ ಕುಟುಂಬಸ್ಥರು ಬಹು ಅಂಗಾಂಗ ದಾನಕ್ಕೆ ಸಮ್ಮತಿಸಿದರು. ಹೃದಯದ ಜೊತೆಗೆ, ಮೂತ್ರಪಿಂಡಗಳು, ಯಕೃತ್ತು ಮತ್ತು ಕಾರ್ನಿಯಾಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾನ ಮಾಡಲಾಯಿತು. ಈ ಪ್ರಕ್ರಿಯೆಯಲ್ಲಿ ಕೇರಳದಲ್ಲಿ ಮೊದಲ ಬಾರಿಗೆ ಚರ್ಮದಾನ ಮಾಡಲಾಗಿದ್ದು, ಅದನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜಿನ ಚರ್ಮ ಬ್ಯಾಂಕ್‌ಗೆ ಕಳುಹಿಸಲಾಗಿದೆ.
ಎರ್ನಾಕುಲಂ ಸರ್ಕಾರಿ ಆಸ್ಪತ್ರೆ ಸೂಪರಿಂಟೆಂಡೆಂಟ್ ಡಾ.ಶಾಹಿರ್ಷಾ ಅವರು ನೀಡಿದ ಮಾಹಿತಿ ಪ್ರಕಾರ, ಆಸ್ಪತ್ರೆ ಒಂದು ವರ್ಷದಿಂದ ಇಂಥದ್ದೊಂದು ಕ್ಷಣಕ್ಕಾಗಿ ಸಜ್ಜಾಗಿತ್ತು. ದಾನಿಯಿಂದ ಪಡೆದ ಹೃದಯವನ್ನು ನೇಪಾಳಿ ಯುವತಿಗೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಈ ಹಿಂದೆ ಮೂತ್ರಪಿಂಡ ಮತ್ತು ಕವಾಟಗಳ ಕಸಿ ಮಾಡಲಾಗಿತ್ತು. ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಡಾ.ಜಾರ್ಜ್ ವಾಲೌರನ್, ಡಾ.ಜಿಯೋ ಪಾಲ್, ಡಾ.ರಾಹುಲ್, ಡಾ.ಪಾಲ್ ಮತ್ತು ಡಾ.ವಿಜೋ ಸೇರಿ ವಿಶೇಷ ತಂಡವು ಮಾಡಿದೆ ಎಂದು ತಿಳಿಸಿದರು.

