ದಾವಣಗೆರೆ: ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳ ಸಿನಿಮಾಗಳಿಗೆ ಥಿಯೇಟರ್ ಮಾಫಿಯಾ ದೊಡ್ಡ ತೊಂದರೆಯಾಗಿ ಪರಿಣಮಿಸಿದೆ. ಈ ಸಮಸ್ಯೆಗೆ ಫಿಲಂ ಚೇಂಬರ್ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲೇಬೇಕು ಎಂದು ನಟ ಝೈದ್ ಖಾನ್ ಆಗ್ರಹಿಸಿದ್ದಾರೆ. ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡ ಅವರು, ಹೊಸಬರು ಎದುರಿಸುವ ಸಂಕಷ್ಟಗಳ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಭಾನುವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಝೈದ್ ಖಾನ್, ಪೈರಸಿ ಮಾಫಿಯಾ ಜೊತೆಗೆ ಥಿಯೇಟರ್ ಮಾಫಿಯಾಗಳೂ ಕನ್ನಡ ಸಿನಿಮಾಗಳಿಗೆ, ಅದರಲ್ಲೂ ಹೊಸಬರ ಚಿತ್ರಗಳಿಗೆ ಗಂಭೀರ ಹಾನಿ ಮಾಡುತ್ತಿವೆ ಎಂದರು. “ನನಗೆ ಒಂದು ಮಟ್ಟದ ಪರಿಚಯ, ನೆಟ್‌ವರ್ಕ್ ಎಲ್ಲವೂ ಇದ್ದವು. ನನ್ನ ಮೊದಲ ಚಿತ್ರಕ್ಕೆ ಆರಂಭದಲ್ಲಿ ಸುಮಾರು 100 ಸ್ಕ್ರೀನ್‌ಗಳು ಸಿಕ್ಕಿದ್ದವು. ಆದರೆ ಕೇವಲ 3–4 ದಿನಗಳಲ್ಲೇ ಅದು 50 ಸ್ಕ್ರೀನ್‌ಗಳಿಗೆ ಇಳಿಯಿತು. ಇಂತಹ ಅನುಭವ ನನಗೇ ಆಗಿದ್ದರೆ, ಯಾವ ಬ್ಯಾಕ್‌ಗ್ರೌಂಡ್ ಇಲ್ಲದೇ ಚಿತ್ರರಂಗದ ಮೇಲೆ ಭರವಸೆ ಇಟ್ಟು ಬರುವ ಹೊಸಬರ ಪರಿಸ್ಥಿತಿ ಏನಾಗಬಹುದು?” ಎಂದು ಪ್ರಶ್ನಿಸಿದರು.
ಕನ್ನಡ ಸಿನಿಮಾಗಳಿಗೆ ಕನಿಷ್ಠ ನಿಗದಿತ ಸಂಖ್ಯೆಯ ಸ್ಕ್ರೀನ್ ನೀಡುವ ವ್ಯವಸ್ಥೆ ಕಡ್ಡಾಯವಾಗಬೇಕು ಎಂದು ಅವರು ಒತ್ತಾಯಿಸಿದರು. ಈ ವಿಷಯದಲ್ಲಿ ಫಿಲಂ ಚೇಂಬರ್ ಸ್ಪಷ್ಟ ಮಾರ್ಗಸೂಚಿ ಜಾರಿ ಮಾಡಿ, ಥಿಯೇಟರ್ ಮಾಫಿಯಾ ವಿರುದ್ಧ ನೋಟಿಸ್‌ಗಳನ್ನು ನೀಡಬೇಕು ಎಂದರು.
ಪೈರಸಿ ಬಗ್ಗೆ ಮಾತನಾಡಿದ ಅವರು, “ತಂತ್ರಜ್ಞಾನ ದಿನೇದಿನೇ ಮುಂದುವರಿಯುತ್ತಿರುವುದರಿಂದ ಪೈರಸಿಯನ್ನು ನಿಯಂತ್ರಿಸುವುದು ಕಷ್ಟವಾಗುತ್ತಿದೆ. ಆದರೆ ಫಿಲಂ ಚೇಂಬರ್ ಹೊಸ ತಾಂತ್ರಿಕ ವಿಧಾನಗಳನ್ನು ಅಳವಡಿಸಿಕೊಂಡು ಪೈರಸಿಯನ್ನು ತಡೆಯುವ ಪ್ರಯತ್ನ ಮಾಡಬೇಕು. ಅದೇ ರೀತಿ ಥಿಯೇಟರ್ ಮಾಫಿಯಾ ಸಮಸ್ಯೆಯನ್ನೂ ಮೂಲದಿಂದ ನಿವಾರಿಸಬೇಕು” ಎಂದು ಮನವಿ ಮಾಡಿದರು.
ಇದೇ ವೇಳೆ ತಮ್ಮ ಅಭಿನಯದ ಕಲ್ಟ್ ಸಿನಿಮಾ ಕುರಿತು ಮಾಹಿತಿ ನೀಡಿದ ಝೈದ್ ಖಾನ್, “ಉತ್ತಮ ಮನರಂಜನೆ ಮತ್ತು ಬಲವಾದ ಸಂದೇಶ ಹೊಂದಿರುವ ಕಲ್ಟ್ ಚಿತ್ರ ಜನವರಿ 23ರಂದು ರಾಜ್ಯಾದ್ಯಂತ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ವಿಜಯನಗರದಿಂದ ಪ್ರಚಾರ ಆರಂಭಿಸಿ ರಾಜ್ಯದಾದ್ಯಂತ ಪ್ರಚಾರ ಕಾರ್ಯ ನಡೆಸುತ್ತಿದ್ದೇವೆ. ಪ್ರೇಕ್ಷಕರು ಚಿತ್ರಮಂದಿರದಲ್ಲೇ ಸಿನಿಮಾ ನೋಡಿ ಬೆಂಬಲ ನೀಡಬೇಕು” ಎಂದರು.
ಚಿತ್ರದ ನಿರ್ದೇಶಕ ಟಿ.ಎಂ. ಅನಿಲಕುಮಾರ್ ಮಾತನಾಡಿ, ಕಲ್ಟ್ ಚಿತ್ರದ ಹೆಚ್ಚಿನ ಶೂಟಿಂಗ್ ಹೊಸಪೇಟೆ ಸುತ್ತಮುತ್ತ ನಡೆದಿದೆ ಎಂದರು. “ಕಲ್ಟ್ ಎನ್ನುವುದು ಒಂದು ಸಂಸ್ಕೃತಿ ಮತ್ತು ವಿಭಿನ್ನ ವ್ಯಕ್ತಿತ್ವದ ಪ್ರತೀಕ. ನಾಯಕನ ಸ್ವಭಾವವೇ ವಿಭಿನ್ನವಾಗಿರುವುದರಿಂದ ಈ ಶೀರ್ಷಿಕೆ ಆಯ್ಕೆ ಮಾಡಲಾಗಿದೆ. ನಾಯಕಿಯರಾಗಿ ಮಲೈಕಾ ವಸುಪಾಲ್ ಮತ್ತು ರಚಿತಾ ರಾಮ್ ಅಭಿನಯಿಸಿದ್ದಾರೆ” ಎಂದು ವಿವರಿಸಿದರು.
ನಾಯಕಿ ಹಾಗೂ ದಾವಣಗೆರೆ ಮೂಲದ ಮಲೈಕಾ ವಸುಪಾಲ್ ಮಾತನಾಡಿ, “ನನ್ನ ಊರಾದ ದಾವಣಗೆರೆಯಲ್ಲೇ ಕಲ್ಟ್ ಚಿತ್ರದ ಪ್ರಚಾರ ನಡೆಯುತ್ತಿರುವುದು ಬಹಳ ಸಂತೋಷದ ವಿಚಾರ. ಈ ಸಿನಿಮಾ ಎಲ್ಲರ ಮನ ಗೆಲ್ಲಲಿದೆ ಎಂಬ ವಿಶ್ವಾಸವಿದೆ” ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಜಿಪಿ ಜ್ಯುವೆಲರ್ಸ್ ಹಾಗೂ ಕೆಜಿಪಿ ಸಮೂಹ ಸಂಸ್ಥೆಗಳ ಮಾಲೀಕ, ಕೆಜಿಪಿ ಫೌಂಡೇಷನ್ ಅಧ್ಯಕ್ಷ ಶ್ರೀಗಂಧ ಶೇಟ್, ಸಂದೇಶ್ ರಾಯ್ಕರ್, ಸಂಕೇತ್ ಶೇಟ್, ಪೃಥ್ವಿ, ರಾಘವೇಂದ್ರ, ರಾಜೇಶ, ರಿಜ್ವಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

