ಮುಂಬಯಿ: ಗೃಹಲಕ್ಷ್ಮಿ ಮಾದರಿಯಲ್ಲಿ ಮಹಿಳೆಯರಿಗೆ 3 ಸಾವಿರ ರುಪಾಯಿ ಫ್ರೀ ನೀಡುವ ಭರವಸೆ ನೀಡಿರುವ ಕಾಂಗ್ರೆಸ್, ಕರ್ನಾಟಕ ಮಾದರಿಯಲ್ಲಿ ಮಹಾರಾಷ್ಟ್ರದ ಮಹಿಳೆಯರ ಮನಗೆಲ್ಲಲು ಮುಂದಾಗಿದೆ.
ಮಹಾರಾಷ್ಟ್ರ ಚುನಾವಣೆಯಲ್ಲಿ ಒಗ್ಗಟ್ಟು ಪ್ರದರ್ಶನ ಮಾಡುತ್ತಿರುವ ಕಾಂಗ್ರೆಸ್ ನೇತೃತ್ವದಲ್ಲಿ ಮಹಾ ವಿಕಾಸ್ ಅಘಾಡಿ, ತನ್ನ ಪ್ರಣಾಳಿಕೆಯಲ್ಲಿ ಜಾತಿ ಗಣತಿ, ಮಹಿಳೆಯರಿಗೆ ಕರ್ನಾಟಕ ಮಾದರಿಯಲ್ಲಿ ಗೃಹಲಕ್ಷ್ಮೀ ಯೋಜನೆ ಜಾರಿಗೆ ತರುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ.
ಕರ್ನಾಟಕ ಮಾದರಿಯಲ್ಲಿ ಪಂಚ ಗ್ಯಾರಂಟಿಗಳನ್ನು ಮೈತ್ರಿಕೂಟ ಸ್ಪರ್ಧೆ ಮಾಡಿರುವ ಮಹಾರಾಷ್ಟ್ರದಲ್ಲೂ ಕಾಂಗ್ರೆಸ್ ಮುಂದುವರಿಸಿದೆ. ಅದರಲ್ಲಿ ಪ್ರಮುಖವಾಗಿ ರಾಜ್ಯದಲ್ಲಿ ಜಾರಿಗೆ ಬಂದಿರುವ ಗೃಹಲಕ್ಷ್ಮೀ ಮಾದರಿಯಲ್ಲಿ ಮಹಾಲಕ್ಷ್ಮಿ ಯೋಜನೆಯಲ್ಲಿ ಮಹಿಳೆಯರಿಗೆ ಮಾಸಿಕ 3000 ರು. ನೀಡಲು ಕಾಂಗ್ರೆಸ್ ಮುಂದಾಗಿದೆ. ಕರ್ನಾಟಕ ಸರಕಾರ ಗೃಹಲಕ್ಷ್ಮೀ ಯೋಜನೆಯಡಿ ಮಾಸಿಕ 2 ಸಾವಿರ ರು. ನೀಡುತ್ತಿದೆ.
ಅದೇ ರೀತಿ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕರಿಗೆ 4 ಸಾವಿರ ರು. ಸ್ಟೇ ಫಂಡ್ ನೀಡಿರುವುದಾಗಿ ಘೋಷಣೆ ಮಾಡಿದೆ. ಜಾತಿಗಣತಿ ನಡೆಸಿ, ಮೀಸಲಾತಿ ಮೇಲಿನ ಪ್ರಮಾಣವನ್ನು ಶೇ. 50 ರ ನಿಗದಿಯನ್ನು ಸಡಿಲಗೊಳಿಸುವ ಭರವಸೆ ನೀಡಿದೆ. ಅಶೋಕ್ ಗೆಲ್ಲೋಟ್ ಸರಕಾರದ ಮಾದರಿಯಲ್ಲಿ25 ಲಕ್ಷ ರು.ಗಳವರೆಗಿನ ಆರೋಗ್ಯ ವಿಮೆಯನ್ನು ಘೋಷಿಸಿದೆ. ಜತೆಗೆ ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ರೈತರಿಗೆ 50 ಸಾವಿರ ರು.ವರೆಗೆ ನೇರ ಸಾಲ ನೀಡುವ ಭರವಸೆಯನ್ನು ನೀಡಿದೆ.
ಮಹಾರಾಷ್ಟ್ರದ 288 ಕ್ಷೇತ್ರಗಳಿಗೆ ನವೆಂಬರ್ 20 ರಂದು ಚುನಾವಣೆ ನಡೆಯಲಿದ್ದು, 23 ಕ್ಕೆ ಫಲಿತಾಂಶ ಘೋಷಣೆಯಾಗಲಿದೆ. ಬಿಜೆಪಿ ನೇತೃತ್ವದ ಮಹಾಯುತಿ ಹಾಗೂ ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ ನೇರ ಸ್ಪರ್ಧೆಗೆ ಇಳಿದಿದ್ದು, ಕಾಂಗ್ರೆಸ್ ಕರ್ನಾಟಕ ಮಾದರಿಯಲ್ಲಿ ಪಂಚ ಗ್ಯಾರಂಟಿ ಘೋಷಣೆ ಮಾಡಿದೆ.